ಗ್ರಾಪಂ ಸದಸ್ಯರ ಬೇಡಿಕೆಗೆ ಸ್ಪಂದಿಸದ ಸರ್ಕಾರ: ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಟೀಕೆ

230123 Kushtagi GP Members Unit
ಕುಷ್ಟಗಿಯಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಪಂ ಸದಸ್ಯರ ಮಹಾಒಕ್ಕೂಟದ ತಾಲೂಕು ಘಟಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ಉದ್ಘಾಟಿಸಿದರು.
Published on

ಕುಷ್ಟಗಿ: ಆಡಳಿತ ನಡೆಸುವವರಿಗೆ ತಾಯಿ ಕರುಳು ಇರಬೇಕು. ಆದರೆ, ರಾಜ್ಯದ ಬಿಜೆಪಿ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನ ಸಭಾಮಂಟಪದಲ್ಲಿ ಸೋಮವಾರ ಗ್ರಾಪಂ ಸದಸ್ಯರ ಮಹಾಒಕ್ಕೂಟದ ತಾಲೂಕು ಘಟಕ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಸದಸ್ಯರ ವಿವಿಧ ಬೇಡಿಕೆ ಈಡೇರಿಸುವಂತೆ ಪಕ್ಷಾತೀತ ಒತ್ತಾಯಿಸಲಾಗಿದೆ. ಆದರೆ, ಸಿಎಂ, ಸಚಿವರು ನಿರ್ಲಕ್ಷೃವಹಿಸಿದ್ದಾರೆ. ಗ್ರಾಪಂ ಸದಸ್ಯರಿಗೆ 10 ಸಾವಿರ ರೂ. ಗೌರವಧನ ಹಾಗೂ ಕಾರು ನೀಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷರು ವಾಗ್ದಾನ ನೀಡಿದ್ದರು. ಕಾರು ಇರಲಿ ಗೌರವ ಧನವನ್ನೂ ನೀಡಲಿಲ್ಲ. ಕರೊನಾ ಇನ್ನಿತರ ನೆಪ ಒಡ್ಡಿ ಬೇಡಿಕೆ ಈಡೇರಿಸಲಿಲ್ಲ. ಮುಂಬರುವ ಕಾಂಗ್ರೆಸ್ ಸರ್ಕಾರ ಸದಸ್ಯರ ಎಲ್ಲ ಬೇಡಿಕೆ ಈಡೇರಿಸಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಾತನಾಡಿ, ಗ್ರಾಪಂ ಚುನಾವಣೆ ನಡೆಸುವುದು ಸವಾಲಿನ ಕೆಲಸ. ಗ್ರಾಪಂ ಸದಸ್ಯರಾಗಿ ಆಡಳಿತ ನಡೆಸುವುದೂ ಕಷ್ಟ. ಎಷ್ಟೇ ಒತ್ತಡವಿದ್ದರೂ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಒಕ್ಕೂಟ ರಚನೆ ಮೂಲಕ ಸಂಘಟಿತರಾಗಿ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಮಾತನಾಡಿದರು. ಮೈಸೂರಿನ ಟಿಸಿಎಸ್‌ಐಆರ್‌ಡಿಯ ಸಂಪನ್ಮೂಲ ವ್ಯಕ್ತಿ ಈರಣ್ಣ ತೋಟದ್ ಉಪನ್ಯಾಸ ನೀಡಿದರು. ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಪಂಪಯ್ಯ ಬಾಗೇವಾಡಿ ಮಾತನಾಡಿದರು. ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ಜಿಲ್ಲಾಧ್ಯಕ್ಷ ಬಳ್ಳಾರಿ ರಾಮಣ್ಣ ನಾಯಕ್, ತಾಲೂಕು ಅಧ್ಯಕ್ಷ ಶರಣಗೌಡ ಪೊಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net