

ಕುಷ್ಟಗಿ: ಶಾಲೆ, ಕಾಲೇಜು ಇನ್ನಿತರ ಸರ್ಕಾರಿ ಆಸ್ತಿಗಳು ಸ್ವಂತದ್ದೆಂದು ಭಾವಿಸಿ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸಭಾ ಭವನ ಲೋಕಾರ್ಪಣೆ ಹಾಗೂ ಸ್ವಾತಂತ್ರ್ಯಾಮೃತ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸರ್ಕಾರಿ ಆಸ್ತಿ ಎಂದಾಕ್ಷಣ ಜನರಲ್ಲಿ ತಾತ್ಸಾರ ಮನೋಭಾವನೆ ಇದೆ. ಸರ್ಕಾರಿ ಕಟ್ಟಡಗಳ ಕಿಟಕಿ, ಗಾಜು ಒಡೆಯುವುದು, ಬಾಗಿಲು ಮುರಿಯುವುದು, ಜೂಜಾಟಕ್ಕೆ ಬಳಕೆ ಮಾಡುವುದು ಸಾಮಾನ್ಯವಾಗುತ್ತಿದೆ. ಸ್ವಂತ ಆಸ್ತಿ ರಕ್ಷಣೆ ಮಾಡಿದಂತೆ ಸರ್ಕಾರದ ಆಸ್ತಿಯ ರಕ್ಷಣೆಯನ್ನೂ ಮಾಡಬೇಕು. ನಮ್ಮ ತೆರಿಗೆ ಹಣದಿಂದಲೇ ನಿರ್ಮಿಸಿರುವ ಕಟ್ಟಡಗಳು ಎಂಬ ಅರಿವು ಮೂಡಬೇಕು. ಮಕ್ಕಳಿಗೂ ನೈತಿಕ ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳನ್ನಾಗಿ ತಯಾರು ಮಾಡಬೇಕು. ಸ್ವಾತಂತ್ರ್ಯಾಮೃತ ಗ್ರಂಥ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಸಂಪೂರ್ಣ ಮಾಹಿತಿ ಹೊಂದಿದೆ. ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪುಸ್ತಕದ ಪರಿಚಯ ಮಾಡಿಕೊಡಬೇಕಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ ಮಾತನಾಡಿ, ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಸಭಾಭವನ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಲಿದೆ. ಸ್ವಾತಂತ್ರ್ಯಾಮೃತ ಗ್ರಂಥ ಅಧ್ಯಯನಕ್ಕೊಂದು ಆಕರ ಗ್ರಂಥವಾಗಲಿದೆ ಎಂದರು.
ಗ್ರಂಥದ ಪ್ರಧಾನ ಸಂಪಾದಕ ಡಾ.ಕೆ.ಶರಣಪ್ಪ ನಿಡಶೇಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ರಾಷ್ಟ್ರ ಮಟ್ಟದ ಹೋರಾಟಗಾರರ ಬಗ್ಗೆ ಮಾಹಿತಿ ಲಭ್ಯವಿದೆ. ಸ್ಥಳೀಯ ಮಟ್ಟದ ಹೋರಾಟಗಾರರ ಹೆಸರುಗಳು ಮಾತ್ರ ಪ್ರಸ್ತಾಪವಾಗುತ್ತಿವೆ. ಇಂಥ ಹೋರಾಟಗಾರರ ಸಮಗ್ರ ಮಾಹಿತಿ ಸ್ವಾತಂತ್ರ್ಯಾಮೃತ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ. ಈ ಸಂಬಂಧ ಲೇಖಕರು ಕ್ಷೇತ್ರ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿರುವುದರಿಂದ ನಾಲ್ಕು ನೂರು ಪುಟಗಳ ಗ್ರಂಥ ಹೊರತರಲು ಸಾಧ್ಯವಾಯಿತು ಎಂದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಗುರುರಾಜ ಛಲವಾದಿ, ಬಿಇಒ ಸುರೇಂದ್ರ ಕಾಂಬ್ಳೆ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ್ ಪತ್ತಾರ್, ಸದಸ್ಯ ಮೈನುದ್ದೀನ್ ಮುಲ್ಲಾ ಇತರರು ಇದ್ದರು.