

ಕುಷ್ಟಗಿ: ರಾಜ್ಯದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ ಎಂದು ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದ ಯಲಬುರ್ಗಾ ತಾಲೂಕು ಹೊಸಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಜೋಗಿ ಸಮುದಾಯದ ಪೂಜಾ ನಿವಾಸಕ್ಕೆ ಭೇಟಿ ನೀಡಲು ಆಗಮಿಸಿದ್ದ ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನರ ಸ್ಥಿತಿ ಶೋಚನೀಯವಾಗಿದೆ. ಅವರ ಸ್ಥಿತಿ ಗತಿ ಅರಿಯಲು ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದೇನೆ. ಅವರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಜೀವನ ಸುಧಾರಣೆಗೆ ಸರ್ಕಾರ ನೀಡುವ 6 ಕೋಟಿ ರೂ. ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಅನುದಾನ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದು, ಮುಖ್ಯಮಂತ್ರಿ ಭರವ ನೀಡಿದ್ದಾರೆ ಎಂದರು. ಅಲೆಮಾರಿಗಳ ಪೈಕಿ ಶೇ.95 ಜನರಿಗೆ ವಾಸ ಮಾಡಲು ಸ್ವಂತ ಜಾಗವೂ ಇಲ್ಲ. ಅಂಥವರಿಗೆ ಸೂರು ಕಲ್ಪಿಸುವ ವ್ಯವಸ್ಥೆಯಾಗಬೇಕಿದೆ. ಸಮುದಾಯದ ಜನ ಹೆಚ್ಚಿರುವ ಕಡೆ ಪ್ರತ್ಯೇಕ ರುದ್ರಭೂಮಿ ವ್ಯವಸ್ಥೆಯೂ ಆಗಬೇಕಿದೆ. ಈ ಸಂಬಂಧ ಸರ್ಕಾರ ಅಲೆಮಾರಿಗಳ ಗಮನ ಸೆಳೆಯುವಂತಹ ಕಾರ್ಯ ಮಾಡಬೇಕಿದೆ ಎಂದು ಒತ್ತಾಯಿಸಿದರು.