

ನರಗುಂದ: ನರಗುಂದ ವಾಣಿಜ್ಯ, ಶೈಕ್ಷಣಿಕ, ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ನೂತನ ರೈಲ್ವೆ ಮಾರ್ಗದ ಅಗತ್ಯವಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡಿದರೆ ಹೊಸ ರೈಲು ಮಾರ್ಗದ ಕನಸು ನನಸಾಗಲಿದೆ ಎಂದು ರೈಲ್ವೆ ಹೋರಾಟ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಹೇಳಿದರು.
ಪಟ್ಟಣದ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ನರಗುಂದ ಮಾರ್ಗವಾಗಿ ಘಟಪ್ರಭಾ- ಕುಷ್ಟಗಿ ನೂತನ ರೈಲು ಮಾರ್ಗ ರಚನೆಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ರೈತರು, ವ್ಯಾಪಾರಸ್ಥರು, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ರಾಜಕೀಯ ಮುಖಂಡರ ಪೂರ್ವಭಾವಿ ಸಭೆ ಹಾಗೂ ಡಾ.ಫ.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನರಗುಂದ ಮಾರ್ಗವಾಗಿ ನೂತನ ರೈಲು ಮಾರ್ಗ ಪ್ರಾರಂಭಿಸುವುದರಿಂದ ಈ ಭಾಗದ ಸಾರ್ವಜನಿಕರಿಗೆ ಏನೆಲ್ಲ ಅನುಕೂಲಗಳಾಗಲಿವೆ ಎಂಬುದರ ಮಾಹಿತಿ ಸಂಗ್ರಹಿಸಿಬೇಕಾಗಿದೆ. ಇದಕ್ಕೂ ಪೂರ್ವ ರೈಲ್ವೆ ಹೋರಾಟದ ವಿವಿಧ ರೂಪುರೇಷೆ ಹಾಗೂ ಪ್ರಯೋಜನಗಳ ಪಟ್ಟಿ ತಯಾರಿಸಿ ಎಲ್ಲೆಡೆ ಹೋರಾಟ ಸಮಿತಿ ರಚಿಸಬೇಕು. ನಂತರ ಸರ್ಕಾರ ಹಾಗೂ ಸಂಬಂಧಪಟ್ಟ ಎಲ್ಲ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಬೇಕು. ಯೋಜನೆಯ ಮೂಲ ಉದ್ದೇಶ ಸಾಕಾರಗೊಳ್ಳದಿದ್ದರೆ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ನೂತನ ರೈಲು ಮಾರ್ಗದ ಬೇಡಿಕೆ ನಿನ್ನೆ, ಮೊನ್ನೆಯದಲ್ಲಿ. ಅದು ನಿರಂತವಾಗಿ ಹೋರಾಟದ ಮೂಲಕ ಸರ್ಕಾರದ ಕಣ್ಣು ತೆರೆಸಬೇಕಿತ್ತು. ಈಗ ಮತ್ತೆ ನೂತನ ರೈಲು ಮಾರ್ಗಕ್ಕಾಗಿ ಹೋರಾಟ ಆರಂಭಗೊಂಡಿದೆ. ಇದಕ್ಕೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು. ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ, ಹೋರಾಟ ಸಮಿತಿ ಸಂಚಾಲಕ ಚನ್ನು ನಂದಿ, ಕಳಸಾ-ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಬಂಡಾಯ ಸಾಹಿತಿ ಮಾರುತಿ ಭೋಸಲೆ, ರಾಘವೇಂದ್ರ ಗುಜಮಾಗಡಿ ಮಾತನಾಡಿದರು. ಸಂಗಪ್ಪ ಗೋವೇಶ್ವರ, ನಂದೀಶ ಮಠದ, ರಾಮಕೃಷ್ಣ ಗೊಂಬೆ, ಕರವೇ ತಾಲೂಕ ಅಧ್ಯಕ್ಷ ನಬಿಸಾಬ್ ಕಿಲ್ಲೇದಾರ, ಸಂಗಪ್ಪ ಗೋವೇಶ್ವರ, ಮುತ್ತು ಸುರಕೋಡ, ಶಂಕರ ಕಾಂಬಳೆ, ಈರಪ್ಪ ಮ್ಯಾಗೇರಿ, ಬಸ್ಸು ತಾವರೆ, ವಿಜಯ ದೊಡಮನಿ, ವಿಜಯಕುಮಾರ ಹೂಗಾರ, ನೀಲಪ್ಪ ಗುಡದನ್ನವರ, ಇತರರಿದ್ದರು.