ವಿದ್ಯುತ್ ಪೂರೈಸಲು ಜೆಸ್ಕಾಂ ಮೀನಮೇಷ ! - ತೋಟದ ಮನೆಗಳಿಗೆ ಕರೆಂಟ್ ನೀಡಲು ಸರ್ಕಾರದ ಆದೇಶ, ಪಾಲನೆ ಮಾಡದ ಅಧಿಕಾರಿಗಳು

kst-2
ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಡಿ.ಎಂ.ವಿನೋದಕುಮಾರ್ ಹೊರಡಿಸಿರುವ ಆದೇಶ.
Published on

ಕುಷ್ಟಗಿ: ತೋಟದ ಮನೆಗಳಿಗೆ ರಾತ್ರಿ ಹೊತ್ತು ವಿದ್ಯುತ್(ಸಿಂಗಲ್ ಫೇಸ್) ನೀಡುವಂತೆ ಸರ್ಕಾರ ಆದೇಶಿಸಿ ತಿಂಗಳು ಗತಿಸಿದರೂ ಆದೇಶ ಪಾಲನೆಗೆ ಜೆಸ್ಕಾಂ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ವಿವಿಧೆಡೆ ತೋಟದ ಮನೆಗಳಲ್ಲಿ ವಾಸಿಸುತ್ತಿರುವ ರೈತ ಕುಟುಂಬಗಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಪಂಪ್‌ಸೆಟ್ ಹೊಂದಿರುವ ರೈತರು ಕೃಷಿ ಕೆಲಸಗಳನ್ನು ನಿರಂತರವಾಗಿ ಮಾಡುವ ಉದ್ದೇಶದಿಂದ ತೋಟಗಳಲ್ಲಿಯೇ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ. ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಮಾತ್ರ ಪೂರೈಸುತ್ತಿರುವುದರಿಂದ ಗೃಹ ಬಳಕೆಗೆ ವಿದ್ಯುತ್ ಇಲ್ಲದೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಜತೆಗೆ ವಿಷ ಜಂತುಗಳ ಭಯದಲ್ಲಿಯೇ ರಾತ್ರಿ ಕಳೆಯಬೇಕಿದೆ.

ರೈತರು ಎದುರಿಸುತ್ತಿರುವ ತೊಂದರೆ ಬಗ್ಗೆ ರೈತಪರ ಸಂಘಟನೆಗಳು ಸರ್ಕಾರದ ಗಮನ ಸೆಳೆದಿದ್ದರಿಂದ ಈ ವಿಚಾರವು ಬೆಳಗಾವಿ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ಆಯಿತು. ಇದರ ಫಲವಾಗಿ ಜ.2 ರಂದು ಸರ್ಕಾರ ಆದೇಶ ಹೊರಡಿಸಿ, ತೋಟದ ಮನೆಗಳಿಗೆ ರಾತ್ರಿ ಹೊತ್ತು ವಿದ್ಯುತ್ ನೀಡುವಂತೆ ಕ್ರಮ ಕೈಗೊಳ್ಳಲು ಕೆಪಿಟಿಸಿಎಲ್ ಸೇರಿದಂತೆ ರಾಜ್ಯದ ವಿವಿಧ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದೆ. ಈ ವಿಚಾರವನ್ನು ಗಂಭೀರ ಎಂದು ಪರಿಗಣಿಸಲಾಗಿದೆ ಎಂದು ಕಲಬುರಗಿಯ ಮುಖ್ಯ ಇಂಜಿನಿಯರ್ ಜೆಸ್ಕಾಂ ವ್ಯಾಪ್ತಿಯ ವಿಭಾಗಗಳ ಇಇಗಳಿಗೆ ಪತ್ರ ಬರೆದು, ಕೂಡಲೇ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ರೈತರ ಸಮಸ್ಯೆಯನ್ನು ಸರ್ಕಾರ ಗಂಭೀರ ಪರಿಗಣಿಸಿದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ರೈತ ಪರ ಸಂಘಟನೆಗಳ ಪದಾಧಿಕಾರಿಗಳು ಹೇಳುತ್ತಿದ್ದಾರೆ.

ಅಧಿಕ ಹೊರೆ ಹಾಕಿದರೆ ಕ್ರಮ

ಐಪಿ ಸೆಟ್ ಫೀಡರ್‌ಗಳ ಮೂಲಕ ವಿದ್ಯುತ್ ಪೂರೈಸಲಾಗುತ್ತಿರುವ ತೋಟದ ಮನೆಗಳ ಗೃಹ ಬಳಕೆಗೆ ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. ಈ ರೀತಿ ವಿದ್ಯುತ್ ನೀಡುವ ಸಮಯದಲ್ಲಿ ಐಪಿ ಸೆಟ್‌ಗಳ ವಿದ್ಯುತ್ ಹೊರೆಯನ್ನು ಗೃಹಬಳಕೆ ಸ್ಥಾವರಗಳ ವಿದ್ಯುತ್ ಹೊರೆ(ಲೋಡ್)ಗೆ ಸೀಮಿತಗೊಳಿಸಲು ಪ್ರೊಟೆಕ್ಷನ್ ರಿಲೇಗಳನ್ನು ಸುಸ್ಥಿಯಲ್ಲಿರಿಸಿಕೊಳ್ಳಬೇಕು. ಅಲ್ಲದೆ ಅನಧಿಕೃತವಾಗಿ ಅಧಿಕ ಹೊರೆ ಹಾಕುವ ಗ್ರಾಹಕರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಯಾವುದೇ ರೀತಿಯ ತೊಡಕು, ತೊಂದರೆಗಳಿದ್ದಲ್ಲಿ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಿರುವ ವಿದ್ಯುತ್ ಸರಬರಾಜು ಕಂಪನಿಗಳ ಸಮನ್ವಯ ಸಮಿತಿಯಲ್ಲಿ ಮಂಡಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಇಂಧನ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಕೋಟ್: ತೋಟದ ಮನೆಗಳಿಗೆ ವಿದ್ಯುತ್ ನೀಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿ ತಿಂಗಳು ಕಳೆದರೂ ಜೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಉಪ ವಿಭಾಗ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಹೀಗೆಯೇ ವಿಳಂಬ ಮಾಡಿದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ.

- ನಜೀರಸಾಬ ಮೂಲಿಮನಿ

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಷ್ಟಗಿ

ಕೋಟ್: ತೋಟದ ಮನೆಗಳಿಗೆ ವಿದ್ಯುತ್ ನೀಡುವ ಸಂಬಂಧ ತಯಾರಿ ನಡೆಸಲಾಗಿದೆ. ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಸಿಂಗಲ್ ಫೇಸ್ ರೋಸ್ಟರ್ ಜಿಒಎಸ್ ಅಳವಡಿಸಬೇಕಿದೆ. ಪ್ರೊಟೆಕ್ಷನ್ ರಿಲೇಗಳನ್ನು ಒದಗಿಸಬೇಕಿದೆ. ಈ ಸಂಬಂಧ ಮಾಹಿತಿ ಪಡೆಯಲಾಗುತ್ತಿದೆ.

- ಮೌನೇಶ ಪತ್ತಾರ

ಎಸ್‌ಇಇ, ಅಧೀಕ್ಷಕ ಅಭಿಯಂತರ ಕಚೇರಿ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net