

ಕುಷ್ಟಗಿ: ನಿರ್ಲಕ್ಷ್ಯದಿಂದ ಅತಿ ವೇಗವಾಗಿ ವಾಹನ ಚಾಲನೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾಗಿದ್ದಾರೆಂದು ತೀರ್ಮಾನಿಸಿ ಸಾರಿಗೆ ಬಸ್‌ನ ಚಾಲಕ ತಿಪ್ಪಣ್ಣ ಬಸಪ್ಪ ನೀರಲಕೇರಿ ಹಾಗೂ ಗೂಡ್ಸ್ ವಾಹನದ ಚಾಲಕ ಹನುಮಸಾಗರದ ಮರ್ತುಜಾಸಾಬ್ ಮೋತೇಕಾರ್‌ಗೆ ತಲಾ 9 ತಿಂಗಳು ಜೈಲುವಾಸ ಹಾಗೂ 2,500 ರೂ. ದಂಡ ವಿಧಿಸಿ ಪಟ್ಟಣದ ಹೆಚ್ಚವರಿ ಸಿವಿಲ್ ನ್ಯಾಧೀಶ ರಫೀಕ್ ಅಹ್ಮದ್ ಆದೇಶ ಹೊರಡಿಸಿದ್ದಾರೆ.
2012ರ ನ.6 ರಂದು ಬಾದಾಮಿಯಿಂದ ಹನುಮಸಾಗರಕ್ಕೆ ಬರುತ್ತಿದ್ದ ಸಾರಿಗೆ ಬಸ್‌ನಲ್ಲಿ ಪ್ರಯಾಣಿಕ ಮಹ್ಮದ್ ಅಲಿ ಎನ್ನುವವರು ಬಸ್‌ನ ಕಿಟಕಿಯಲ್ಲಿ ತಲೆ ಹೊರಚಾಚಿ ಕುಳಿತಾಗ ಎದುರಿನಿಂದ ಬಂದ ಗೂಡ್ಸ್ ವಾಹನದಲ್ಲಿದ್ದ ಕಬ್ಬಿಣದ ಸರಳು ತಾಗಿದ್ದರಿಂದ ಪ್ರಯಾಣಿಕ ಮಹ್ಮದ್ ಅಲಿ ಮೃತಪಟ್ಟಿದ್ದರು. ಸದರಿ ಪ್ರಕರಣದ ವಿಚಾರಣೆ ನಡೆದು ಪ್ರಯಾಣಿಕನ ಸಾವಿಗೆ ಬಸ್ ಹಾಗೂ ಗೂಡ್ಸ್ ವಾಹನದ ಚಾಲಕರ ನಿರ್ಲಕ್ಷ್ಯವೇ ಕಾರಣ ಎಂದು ತೀರ್ಮಾನಿಸಿ ಕಲಂ 279ಪ್ರಕಾರ ಒಬ್ಬೊಬ್ಬರಿಗೆ 3 ತಿಂಗಳು ಜೈಲು ವಾಸ, 500ರೂ. ದಂಡ ಹಾಗೂ 304(ಎ) ಪ್ರಕಾರ 6 ತಿಂಗಳು ಜೈಲು ಹಾಗೂ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.