ವೈದ್ಯೆ ನಿರ್ಲಕ್ಷ್ಯದಿಂದ ಶಿಶು ಸಾವು: ಗರ್ಭಿಣಿ ಸಂಬಂಧಿಕರಿಂದ ಪ್ರತಿಭಟನೆ

Untitled design (15)
ಕುಷ್ಟಗಿಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗರ್ಭಿಣಿ ಹನುಮಂತಿ ಮಾದರ್ ಸಂಬಂಧಿಕರು ಪ್ರತಿಭಟನೆ ನಡೆಸಿ ವೈದ್ಯೆ ಚಂದ್ರಕಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಮುದ್ದುರಂಗಸ್ವಾಮಿ ಇದ್ದರು.
Published on

ಕುಷ್ಟಗಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆಗೆ ವಿಳಂಬ ಮಾಡಿದ್ದರಿಂದ ಶಿಶು ತಾಯಿ ಹೊಟ್ಟೆಯಲ್ಲಿ ಮೃತಪಟ್ಟಿದೆ ಎಂದು ಆರೋಪಿಸಿ ಗರ್ಭಿಣಿ ಸಂಬಂಧಿಕರು ಬುಧವಾರ ಪ್ರತಿಭಟನೆ ನಡೆಸಿದರು.


ತಾಲೂಕಿನ ಲಿಂಗದಹಳ್ಳಿ ಗ್ರಾಮದ ಗರ್ಭಿಣಿ ಹನುಮಂತಿ ಮಾದರ್ ಹೆರಿಗೆಗೆಂದು ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು. ಮಗುವಿನ ತಲೆಯ ಗಾತ್ರ ದೊಡ್ಡದಿರುವುದರಿಂದ ಸಿಜೇರಿಯನ್ ಮಾಡಬೇಕು ಎಂದು ಆಸ್ಪತ್ರೆಯ ವೈದ್ಯೆ ಚಂದ್ರಕಲಾ ತಿಳಿಸಿದ್ದರು. ತಡವಾಗಿ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರಿಂದ ಶಿಶು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ. ಇದಕ್ಕೆ ವೈದ್ಯೆಯ ನಿರ್ಲಕ್ಷ್ಯವೇ ಕಾರಣ ಎಂದು ಗರ್ಭಿಣಿ ಹನುಮಂತಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಯಶವಂತ ಬಿಸನಳ್ಳಿ ಹಾಗೂ ಪಿಎಸ್‌ಐ ಮುದ್ದುರಂಗಸ್ವಾಮಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದರೂ ಡಿಎಚ್‌ಒ ಸ್ಥಳಕ್ಕೆ ಭೇಟಿ ನೀಡಿ ವೈದ್ಯೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ವಿಡಿಯೋ ಕಾಲ್ ಮೂಲಕ ಸ್ಪಂದಿಸಿದ ಡಿಎಚ್‌ಒ ಲಿಂಗರಾಜ್, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.


ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಚೀಫ್ ಮೆಡಿಕಲ್ ಆಫೀಸರ್, ಎಂಡಿ, ನೇತ್ರ ತಜ್ಞ, ಚರ್ಮರೋಗ ತಜ್ಞ ಹುದ್ದೆ ಖಾಲಿ ಇವೆ. ಇರುವ ವೈದ್ಯರಿಂದ ಸಕಾಲಕ್ಕೆ ಚಿಕಿತ್ಸೆ ಸಿಗುವುದಿಲ್ಲ. ಸರ್ಕಾರಿ ಆಸ್ಪತ್ರೆಯಾದರೂ ಎಲ್ಲದಕ್ಕೂ ಹಣ ನೀಡಲೇಬೇಕು. ವೈದ್ಯರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ರೋಗಿಗಳಿಂದ ಕೇಳಿಬರುತ್ತಿದ್ದು, ಹೊಟ್ಟೆಯಲ್ಲಿ ಶಿಶು ಮೃತಪಟ್ಟಿರುವ ಘಟನೆ ಸಾರ್ವಜನಿಕರ ಆಕ್ರೋಶ ಇಮ್ಮಡಿಗೊಳ್ಳುವಂತೆ ಮಾಡಿದೆ.

ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ. ರೋಗಿಗಳಿಂದ ಹಣ ಪಡೆಯುತ್ತಾರೆಂಬ ಆರೋಪಕ್ಕೆ ಸಂಬಂಧಿಸಿದಂತೆಯೂ ತನಿಖೆ ಕೈಗೊಳ್ಳಲಾಗುತ್ತಿದೆ.ಡಾ.ಲಿಂಗರಾಜ್, ಡಿಎಚ್‌ಒ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net