ಸ್ಪಂದಿಸದ ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಮೊರೆ

Untitled design (1)
ಕುಷ್ಟಗಿಯ 3ನೇ ವಾರ್ಡ್‌ನ ರಹವಾಸಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ನಲಿನ್ ಅತುಲ್‌ಗೆ ಗುರುವಾರ ಮನವಿ ಸಲ್ಲಿಸಿ ವಾರ್ಡ್‌ನ ಸಮಸ್ಯೆ ಹೇಳಿಕೊಂಡರು. ಸಂಘದ ಅಧ್ಯಕ್ಷ ಡಿ.ಬಿ.ಗಡೇದ, ಕಾರ್ಯದರ್ಶಿ ಬಸವರಾಜ ಗಾಣಿಗೇರ, ಸದಸ್ಯರಾದ ನಾಗರಾಜ ಶೆಟ್ಟಿ, ಡಾ.ಬಾಬು, ಈಶಪ್ಪ ತಳವಾರ, ಅನಿಲಕುಮಾರ್ ಆಲಮೇಲ್, ಬಾಬು ಘೋರ್ಪಡೆ, ಉಮೇಶ ಶೆಟ್ಟರ್, ತಿರುಮಲರಾವ್ ದಂಡಿನ್ ಇತರರು ಇದ್ದರು.
Published on

ಕುಷ್ಟಗಿ: ಸ್ಪಂದಿಸದ ತಾಲೂಕು ಆಡಳಿತದಿಂದ ಬೇಸತ್ತ ಪಟ್ಟಣದ 3ನೇ ವಾರ್ಡ್‌ನ ನಿವಾಸಿಗಳು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಸಹಾಯಕ ಆಯುಕ್ತ ಮಹೇಶ ಮಾಲಗಿತ್ತಿಗೆ ಮನವಿ ಸಲ್ಲಿಸಿ ವಾರ್ಡ್‌ನ ಸಮಸ್ಯೆಗೆ ಸ್ಪಂದಿಸುವಂತೆ ಅಲವತ್ತುಕೊಂಡಿದ್ದಾರೆ.

ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವುದು, ರಸ್ತೆ ನಿರ್ಮಿಸುವುದು, ರಾಜಕಾಲುವೆ ನಿರ್ಮಾಣ, ಹಳೇ ವಿದ್ಯುತ್ ಕಂಬ ಹಾಗೂ ತಂತಿ ತೆರವುಗೊಳಿಸಿ ಹೊಸದಾಗಿ ಅಳವಡಿಸುವುದು, ಉದ್ಯಾನಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿರುವ ನಿವಾಸಿಗಳಿಗೆ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ. ಪುರಸಭೆ, ಲೋಕೋಪಯೋಗಿ ಇಲಾಖೆ, ಜೆಸ್ಕಾಂ ಸೇರಿದಂತೆ ವಿವಿಧ ಅಧಿಕಾರಿಗಳಲ್ಲದೇ ಶಾಸಕರಿಗೂ ಪತ್ರ ಬರೆದು ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿರುವ ನಿವಾಸಿಗಳು, ‘ರಹವಾಸಿಗಳ ಸಂಘ’ ಹೆಸರಿನಲ್ಲಿ ಸಂಘಟಿತರಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಈವರೆಗೆ 11ಬಾರಿ ಲಿಖಿತ ಮನವಿ ಸಲ್ಲಿಸಿದ್ದಾರೆ.
ಬೀಸೋ ದೊಣ್ಣೆಯಿಂದ ಪಾರು ವಾರ್ಡ್‌ನಲ್ಲಿ ಸಮರ್ಪಕ ರಸ್ತೆ ಇಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ. ರಾಜಕಾಲುವೆ ನಿರ್ಮಾಣಕ್ಕೆ 42ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ಆದೇಶ ನೀಡಿದ್ದಾಗ್ಯೂ ಕೆಲಸ ಆರಂಭಿಸಿಲ್ಲ.

ವಾಸಿಗಳು ಪದೇ ಪದೆ ಆಗ್ರಹಿಸಿದರೆಂಬ ಕಾರಣಕ್ಕೆ ರಾಜ ಕಾಲುವೆ ನಿರ್ಮಾಣಕ್ಕೆ ನೆಲ ಅಗೆದು ಕೈಬಿಟ್ಟಿದ್ದರಿಂದ ನಿವಾಸಿಗಳ ಓಡಾಟಕ್ಕೆ ತೊಂದರೆ ಉಂಟಾಗಿ ವಯೋವೃದ್ಧರು, ಮಕ್ಕಳು ಆಯತಪ್ಪಿ ತಗ್ಗಿನಲ್ಲಿ ಬೀಳಲಾರಂಭಿಸಿದರು. ಕಳೆದ ಏ.15ರಂದು ನಿವಾಸಿಗಳೇ ಹಣ ಸಂಗ್ರಹಿಸಿಕೊಂಡು ರಸ್ತೆಗೆ ಮರಮ್ ಹಾಕಿಸಿ ಸಮತಟ್ಟು ಮಾಡಿಕೊಳ್ಳುವ ಮೂಲಕ ಆಡಳಿತ ವರ್ಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ನಂತರವೂ ಅಧಿಕಾರಿಗಳಿಂದ ಸ್ಪಂದನೆ ಸಿಗದೆ ನಿವಾಸಿಗಳು ಲೋಕಸಭೆ ಚುನಾವಣೆ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದರು. ಮೇ 2ರಂದು ವಾರ್ಡ್‌ಗೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿಯಾಗಿದ್ದ ರೇಷ್ಮಾ ಹಾನಗಲ್, ತಹಸೀಲ್ದಾರರಾಗಿದ್ದ ರವಿ ಅಂಗಡಿ, ಲೋಕೋಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವಾರ್ಡ್‌ಗೆ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net