

ಕುಷ್ಟಗಿ: ಬದನೆಕಾಯಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಬೆಳೆಗಾರರಿಗೆ ನಷ್ಟದ ಭೀತಿ ಎದುರಾಗಿದೆ. ಈವರೆಗೆ ಉತ್ತಮ ಬೆಲೆಯಲ್ಲಿ ಮಾರಾಟವಾದ ಬದನೆಯನ್ನು ಈ ವಾರ ಕೇಳುವವರು ಇಲ್ಲದಂತಾಗಿದೆ. ಸಾವಿರಾರು ರೂ. ಖರ್ಚು ಮಾಡಿ ಬೆಳೆದ ರೈತನಿಗೆ ಕಟಾವು ಮಾಡಿದವರಿಗೆ ಕೂಲಿ ಪಾವತಿಸುವುದೂ ಕಷ್ಟಸಾಧ್ಯವಾಗಿದೆ.
ಒಂದು ಕಿಲೋ ಬದನೆ 50-60ರೂ.ವರೆಗೆ ಮಾರಾಟವಾಗುತ್ತಿತ್ತು. ಸದ್ಯ ಒಂದು ಟ್ರೇ (20ಕಿಲೋ) ಬದನೆಯನ್ನು ವ್ಯಾಪಾರಿಗಳು 50-60 ರೂ.ಗೆ ಖರೀದಿಸುತ್ತಿದ್ದಾರೆ. ಹತ್ತಾರು ಟ್ರೇಗಳೊಂದಿಗೆ ಶನಿವಾರ ಮಾರುಕಟ್ಟೆಗೆ ಬಂದಿದ್ದ ರೈತರು ಬದನೆ ಮಾರಾಟ ಮಾಡಿದ ಹಣದಲ್ಲಿ ವಾಹನದ ಬಾಡಿಗೆ ಪಾವತಿಸಿ ಹಿಂತಿರುಗಿದ್ದಾರೆ.
ತಮ್ಮ 3ಎಕರೆ ಜಮೀನಿನಲ್ಲಿ ಡ್ರಿಪ್ ಮೂಲಕ ನೀರಾವರಿ ಮಾಡಿಕೊಂಡಿರುವ ತಾಲೂಕಿನ ಹಿರೇಮನ್ನಾಪುರದ ರೈತ ಶಿವಾನಂದ ಹಿರೇಮಠ, ಬೂದಗುಂಪಾ ನರ್ಸರಿಯಿಂದ ಶೈನ್ ತಳಿಯ ಬೀಜ ತಂದು ನಾಟಿ ಮಾಡಿದ್ದಾರೆ. ಸದ್ಯ ಗಿಡಗಳ ತುಂಬ ಕಾಯಿಗಳೇ ಕಂಡುಬರುತ್ತಿದ್ದು, ವಾರದಲ್ಲಿ 40-50ಟ್ರೇ ಇಳುವರಿ ಬರುತ್ತಿದೆ. ಆರಂಭದ ಇಳಿವರಿಗೆ ಉತ್ತಮ ಬೆಲೆ ಕಂಡುಕೊಂಡ ರೈತನಿಗೆ ಸದ್ಯ ಖರ್ಚು ನಿಭಾಯಿಸುವುದೂ ಕಷ್ಟಸಾಧ್ಯವಾಗುತ್ತಿದೆ.
ಪ್ರತಿ 15ದಿನಕ್ಕೊಮ್ಮೆ ಔಷಧ ಸಿಂಪರಣೆ ಮಾಡುತ್ತಿರುವುದರಿಂದ ಗುಣಮಟ್ಟದ ಇಳುವರಿ ಕೈಸೇರುತ್ತಿದೆ. ಪ್ರತಿ ಸಲದ ಔಷಧ ಸಿಂಪರಣೆಗೆ 3-4ಸಾವಿರ ರೂ. ಖರ್ಚಾಗುತ್ತದೆ. ಕಟಾವು ಮಾಡುವ ಕೂಲಿಕಾರರಿಗೆ 2ತಾಸಿನ ಕೆಲಸಕ್ಕೆ ತಲಾ ನೂರು ರೂ. ಪಾವತಿಸಬೇಕು. ಮಾರುಕಟ್ಟೆಯ ದಲ್ಲಾಳಿಗಳಿಗೆ ನೂರಕ್ಕೆ 10ರೂ. ಕಮಿಷನ್ ನೀಡಬೇಕು. ಇಷ್ಟೆಲ್ಲ ಖರ್ಚು ಸರಿದೂಗಿಸಿ ಲಾಭ ಪಡೆಯಬೇಕೆಂದರೆ ಟ್ರೇ ಒಂದಕ್ಕೆ ಕನಿಷ್ಠ 200ರೂ. ಬೆಲೆ ಸಿಗಬೇಕು ಎಂದು ರೈತ ಶಿವಾನಂದ ಹೇಳುತ್ತಿದ್ದಾರೆ.
ಔಷಧ ಸಿಂಪಡಣೆ, ಕೂಲಿ ವೆಚ್ಚ ಸೇರಿ ಸಾವಿರಾರು ರೂ. ಖರ್ಚು ಮಾಡಿಕೊಂಡು ಬದನೆ ಬೆಳೆದಿದ್ದೇನೆ. ಸಾಕಷ್ಟು ಪ್ರಮಾಣದ ಇಳುವರಿ ಕೈಸೇರುತ್ತಿದೆ. ಬೆಲೆ ಕುಸಿತದಿಂದ ನಷ್ಟದ ಭೀತಿ ಎದುರಾಗಿದೆ. ಟ್ರೇ ಬದನೆಯನ್ನು 50-60ರೂ.ಗೆ ಖರೀದಿಸಲಾಗುತ್ತಿದೆ.ಶಿವಾನಂದ ಹಿರೇಮಠಹಿರೇಮನ್ನಾಪುರ ರೈತ