

ಕುಷ್ಟಗಿ: ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಬಂಗಾರ ಹಾಗೂ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಕಳ್ಳರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ ನೀರಲಗಿ ತಾಲೂಕಿನ ಗಂಗನಕಟ್ಟೆ ಗ್ರಾಮದ ಖಾಜಾಹುಸೇನ್ ಪೀರಸಾಬ್ ನದಾಫ್, ಚಿತ್ರದುರ್ಗ ಜಿಲ್ಲೆ ಆಜಾದ್ ನಗರದ ಫಾತಿಮಾ ಇಮಾಮಸಾಬ್ ಜಬಿ ಹಾಗೂ ಕಮ್ರೂನ್‌ಬಿ ದಾದಾಪೀರ್ ಬಂಧಿತರು. ಬಂಧಿತರಿಂದ ಕಳುವು ಮಾಡಿದ 25ಸಾವಿರ ರೂ. ಮೌಲ್ಯದ 5 ಗ್ರಾಂ ಚಿನ್ನದ ಜುಮುಕಿ, 16 ಸಾವಿರ ರೂ. ಮೌಲ್ಯದ ಬೆಳ್ಳಿಯ ಎರಡು ಕಾಲು ಚೈನ್‌ಗಳು ಹಾಗೂ ಟಾಟಾ ಇಂಡಿಕಾ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು, ಕಳ್ಳರನ್ನು ನ್ಯಾಯಾಂಗದ ವಶಕ್ಕೊಪ್ಪಿಸಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಬಂದರು: ಫೆ.10 ರಂದು ಬೆಳಗ್ಗೆ ಕಾರಿನಲ್ಲಿ ಬಂದಿಳಿದ ಆರೋಪಿತರು ಪಟ್ಟಣದ ಕಂದಕೂರು ಜ್ಯುವೆಲರ್ಸ್ ಪ್ರವೇಶಿಸಿ, ಮಕ್ಕಳ ಮದುವೆಗೆ ಆಭರಣ ತೋರಿಸುವಂತೆ ಹೇಳುದ್ದಾರೆ. ಬುರ್ಕಾ ಹಾಕಿಕೊಂಡು ಬಂದಿದ್ದ ಮಹಿಳೆ ಆಭರಣವನ್ನು ಕೆಳಗೆ ಬೀಳಿಸಿ ಪುನಃ ಮೇಲಿಟ್ಟಂತೆ ಮಾಡುತ್ತಾರೆ. ಆ ವೇಳೆ ಪಕ್ಕದಲ್ಲಿಯೇ ಇದ್ದ ಮತ್ತೊಬ್ಬ ಅಂಗಡಿ ಮಾಲೀಕರ ಗಮನವನ್ನು ಬೇರೆಡೆ ಸೆಳೆಯುತ್ತಾನೆ. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಆಭರಣಗಳು ಇಷ್ಟ ಆಗಲಿಲ್ಲ ಎಂದು ಹೇಳಿ ಅವಸರದಲ್ಲಿ ಹೊರನಡೆಯುತ್ತಾರೆ.
ಮರುದಿವಸ ಅಂಗಡಿಗೆ ಬಂದಾಗ ಆಭರಣಗಳು ಕಾಣೆಯಾಗಿರುವುದು ಮಾಲೀಕರ ಗಮನಕ್ಕೆ ಬಂದು ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆ ಹಾಗೂ ಮತ್ತೊಬ್ಬನ ಮೇಲೆ ಅನುಮಾನ ಮೂಡಿ ಅಂಗಡಿಯ ಮಾಲೀಕ ವಿನಯ್ ಕಂದಕೂರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಫೆ.13ರಂದು ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.