

ಕುಷ್ಟಗಿ: ಪಟ್ಟಣದಲ್ಲಿ ಮಂಗಳವಾರ ಜಾಗೃತಿ ಜಾಥಾ ಕೈಗೊಂಡ ವಾರಿಯರ್ಸ್‌ಗೆ ಪಟ್ಟಣದ ಜನತೆ ಹೂ ಚೆಲ್ಲಿ ಅಭಿನಂದಿಸಿದರು. ತಹಸಿಲ್ ಕಚೇರಿಯಿಂದ ಹೊರಟ ಜಾಥಾ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಪುನಃ ತಹಸಿಲ್ ಕಚೇರಿ ತಲುಪಿತು. ತಹಸಿಲ್ ಕಚೇರಿಯಲ್ಲಿ ಸಮಾವೇಶಗೊಂಡ ವಾರಿಯರ್ಸ್‌ಗೆ ದುರ್ಗಾ ಪರಮೇಶ್ವರಿ ಆಶ್ರಮದ ಶ್ರೀ ಸದಾನಂದ ಸ್ವಾಮೀಜಿ ಶಾಲು ಹೊದಿಸಿ ಸನ್ಮಾನಿಸಿದರು.
ತಹಸೀಲ್ದಾರ್ ಎಂ.ಸಿದ್ದೇಶ ಮಾತನಾಡಿ, ಜನರ ಸುರಕ್ಷತೆಗಾಗಿ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಆನಂದ ಗೋಟೂರು ಮಾತನಾಡಿ, ಆರೋಗ್ಯ ಸಂಬಂಧಿತ ಸಮಸ್ಯೆಗೆ ತಾಲೂಕು ಆಸ್ಪತ್ರೆಯ ವೈದ್ಯರು ದಿನದ 24ತಾಸು ಸೇವೆಗೆ ಸಿದ್ಧರಿದ್ದಾರೆ. ಗ್ರೀನ್ ಝೋನ್ ಎಂಬ ಕಾರಣಕ್ಕೆ ಯಾವುದನ್ನೂ ಉದಾಸೀನ ಮಾಡಬಾರದು. ಸುತ್ತಲಿನ ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳಲ್ಲಿ ಸೋಂಕಿತರು ಇರುವುದರಿಂದ ಯಾವುದೇ ಕಾರಣಕ್ಕೂ ಅಂತರ್ ಜಿಲ್ಲೆಗೆ ಹೋಗಿ ಬರುವುದು ಮಾಡಬಾರದು ಎಂದು ಸಲಹೆ ನೀಡಿದರು.
ಸಿಪಿಐ ಜಿ.ಚಂದ್ರಶೇಖರ ಮಾತನಾಡಿ, ಸಡಿಲಿಕೆ ನೀಡಲಾಗಿದೆ ಎಂಬ ಕಾರಣಕ್ಕೆ ಅನಗತ್ಯ ತಿರುವುದು ಬೇಡ. ಲಾಕ್ ಡೌನ್ ಅವಧಿ ಮುಗಿಯುವ ವರೆಗೆ ಮನೆಯಲ್ಲಿಯೇ ಇದ್ದು ಸಹಕರಿಸಿ ಎಂದು ಮನವಿ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್ ಮಾತನಾಡಿ, ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸುವಂತೆ ವಿವಿಧ ಅಂಗಡಿಕಾರರಿಗೆ ತಿಳಿಸಿದರು. ಪಿಎಸ್‌ಐ ಚಿತ್ತರಂಜನ್, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಚಂದ್ರಕಾಂತ ಮಂತ್ರಿ, ಹಿರಿಯ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ ಇತರರು ಇದ್ದರು. ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಗೃಹರಕ್ಷಕರು, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.