

ಕುಷ್ಟಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ವ್ಯಾಪಾರ ವಹಿವಾಟು ನಡೆಸಲಾಗುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಲಾಗುತ್ತಿದೆ.
ಕೃಷಿ ಉತ್ಪನ್ನ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಟ್ಟ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಷರತ್ತು ವಿಧಿಸಿತ್ತು. ಅದರಂತೆ ಉತ್ಪನ್ನ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ಆರಂಭವಾಗಿದೆಯಾದರೂ ಷರತ್ತುಗಳ ಪಾಲನೆಯಾಗುತ್ತಿಲ್ಲ. ಮಾರುಕಟ್ಟೆ ಹಮಾಲರು ಸೇರಿ ಬರುವ ರೈತರಿಗೆ ಮಾಸ್ಕ್ ವಿತರಿಸಬೇಕು. ಸ್ಯಾನಿಟೈಜರ್, ಕೈತೊಳೆದುಕೊಳ್ಳಲು ನೀರಿನ ವ್ಯವಸ್ಥೆ ಮಾಡಬೇಕು ಎಂದು ವರ್ತಕರಿಗೆ ಸೂಚನೆ ನೀಡಲಾಗಿತ್ತು. ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಮಾರುಕಟ್ಟೆ ಕಚೇರಿಯ ವ್ಯವಸ್ಥಾಪಕರು ಸೂಕ್ತ ಮೇಲ್ವಿಚಾರಣೆ ನಡೆಸುವಂತೆಯೂ ಸೂಚಿಸಲಾಗಿತ್ತು. ಸೂಚನೆ ಪಾಲನೆಯಾಗದಿರುವುದು ಬುಧವಾರ ಕಂಡುಬಂತು.
ವೃದ್ಧರ ಸರದಿ ಸಾಲು: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳ ಸರದಿ ಸಾಲು ಬುಧವಾರ ಕಂಡುಬಂತು. ಕಚೇರಿಗೆ ಬಂದ ವೃದ್ಧರು ಮಾಸ್ಕ್ ಧರಿಸಿರಲಿಲ್ಲ. ಜತೆಗೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ನಿಂತದ್ದು ಕಂಡುಬಂತು. ಖಜಾನೆ 2ರ ಮುಖಾಂತರ ಮಾಸಾಶನ ವಿತರಣೆ ಆರಂಭಿಸಿದಾಗಿನಿಂದ ಫಲಾನುಭವಿಗಳ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜಿರಾಕ್ಸ್ ಪ್ರತಿ ಪಡೆದು ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಸಂಬಂಧಿಸಿದ ದಾಖಲೆ ಸಲ್ಲಿಸಲು ಬಂದಿರುವುದಾಗಿ ಫಲಾನುಭವಿಗಳು ತಿಳಿಸಿದರು.
ಹಮಾಲರಿಗೆ ಹಾಗೂ ರೈತರಿಗೆ ಮಾಸ್ಕ್ ವಿತರಣೆ, ಸ್ಯಾನಿಟೈಜರ್, ನೀರಿನ ವ್ಯವಸ್ಥೆ ಮಾಡುವಂತೆ ಹಾಗಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಮಾರುಕಟ್ಟೆಗೆ ಭೇಟಿ ನೀಡಿ ನಿಯಮ ಉಲ್ಲಂಘನೆ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಆನ್‌ಲೈನ್ ಮುಖಾಂತರವೇ ಮಾಸಾಶನ ವಿತರಿಸಲಾಗುತ್ತಿದೆ. ಕಚೇರಿಗೆ ಬಾರದಂತೆ ಸೂಚನೆಯನ್ನೂ ನೀಡಲಾಗಿದೆ. ಹೀಗೆ ಬರುವವರಿಗೆ ತಾಕೀತು ಮಾಡಲಾಗುವುದು. | ಎಂ.ಸಿದ್ದೇಶ ಕುಷ್ಟಗಿ ತಹಸೀಲ್ದಾರ್