‘ಕೈ’ ಬಿಡುವ ನಿರ್ಧಾರ ತಿಳಿಸಿದ ಬ್ಲಾಕ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ

21kst-2
Published on

ಕುಷ್ಟಗಿ: ಸದ್ಯದಲ್ಲೇ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರುವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ತಿಳಿಸಿದರು.

ತಮ್ಮ ತೋಟದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಡಿದರು. ತಮ್ಮ ಸಹೋದರ ಅಶೋಕ್ ಬಳೂಟಗಿ ಕಾಂಗ್ರೆಸ್ ತೊರೆಯುವ ನಿರ್ಧಾರ ತಿಳಿಸಿದ ನಂತರ ತಾವೂ ಪಕ್ಷದಿಂದ ಹೊರಬರುವ ಮುನ್ಸೂಚನೆಯನ್ನು ನೀಡಿದ್ದ ದೇವೇಂದ್ರಪ್ಪ ಶಾಸಕ ಅಮರೇಗೌಡ ಬಯ್ಯಪುರ ವಿರುದ್ಧ ಅಸಮಾಧಾನ ಹೊರಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾದರೂ ಬೆಲೆ ಇರಲಿಲ್ಲ. ಉತ್ಸವ ಮೂರ್ತಿಯಂತೆ ಇರುವುದು ಸರಿ ಎನಿಸಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಬೇರೆಯವರ ಅಭಿಪ್ರಾಯಗಳಿಗೆ ಶಾಸಕ ಅಮರೇಗೌಡ ಬಯ್ಯಪುರ ಮನ್ನಣೆ ನೀಡುತ್ತಿರಲಿಲ್ಲ. ಈ ವಿಚಾರಕ್ಕೆ ಅವರು ಶಾಸಕರಾಗಿ ಆಯ್ಕೆಯಾದಾಗಿನಿಂದ ಅವರ ಮತ್ತು ನನ್ನ ನಡುವೆ ಘರ್ಷಣೆ ನಡೆಯುತ್ತಲೇ ಇತ್ತು. ಅಶೋಕ್ ಬಳೂಟಗಿ ಪಕ್ಷ ತೊರೆಯುವ ನಿರ್ಧಾರ ತಿಳಿಸಿದ ನಂತರ ಎಲ್ಲರೂ ಒಂದೇ ಕಡೆ ಇರೋಣ ಎಂಬ ಉದ್ದೇಶದಿಂದ ಎಲ್ಲರ ಅಭಿಪ್ರಾಯ ತಿಳಿದು ನಿರ್ಧಾರ ಕೈಗೊಳ್ಳಲು ಈ ಸಭೆ ಕರೆಯಲಾಗಿದೆ ಎಂದರು.

ಈ ಬಾರಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲರಿಗೆ ದೈವ ಒಲಿದು ಬರಲಿದೆ. ಕೊಂಬು ಬಂದವರಿಗೆ ದೇವರೇ ಮುರಿಯುತ್ತಾನೆ ಎಂದು ಪರೋಕ್ಷವಾಗಿ ಅಮರೇಗೌಡ ಬಯ್ಯಪುರ ಸೋಲುವ ಬಗ್ಗೆ ಭವಿಷ್ಯ ನುಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಕೆ.ಶರಣಪ್ಪ, ಪ್ರಮುಖರಾದ ಅಶೋಕ್ ಬಳೂಟಗಿ, ಪರಸಪ್ಪ ಕತ್ತಿ, ತಾಲೂಕಿನ ವಿವಿಧ ಗ್ರಾಮಗಳ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net