

ಕುಷ್ಟಗಿ: ಪೌರ ಕಾರ್ಮಿಕರಿಗೆ ಸನ್ಮಾನದ ಬದಲು ಅಗತ್ಯ ಸೌಲಭ್ಯ ನೀಡಬೇಕಿದೆ ಎಂದು ಪುರಸಭೆ ಸದಸ್ಯ ವಸಂತಪ್ಪ ಮೇಲಿನಮನಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಪೌರ ಕಾರ್ಮಿಕರಿಗೆ ಸನ್ಮಾನಿಸುವ, ಪಾದಪೂಜೆ ನೆರೆವೇರಿಸುವ ಕಾರ್ಯ ಅಲ್ಲಲ್ಲಿ ನಡೆಯುತ್ತಿವೆ. ಪೌರ ಕಾರ್ಮಿಕರಿಗೆ ಕೆಲಸ ಮಾಡುವ ವೇಳೆ ಸುರಕ್ಷಾ ಸಾಧನಗಳನ್ನು ನೀಡಿ ಸಕಾಲಕ್ಕೆ ವೇತನ ಪಾವತಿಸುವ ಕಾರ್ಯವಾಗಬೇಕಿದೆ. ಮೃತ ಕಾರ್ಮಿಕರ ಕುಟುಂಬಗಳಿಗೆ ಹಣಕಾಸಿನ ನೆರವು ಹಾಗೂ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕಿದೆ ಎಂದರು.
ಸದಸ್ಯ ಬಸವರಾಜ ಬುಡಕುಂಟಿ ಮಾತನಾಡಿ, ಪೌರ ಕಾರ್ಮಿಕರು ಆರೋಗ್ಯದ ಕಡೆ ಗಮನಹರಿಸಬೇಕಿದೆ ಎಂದರು. ಮುಖ್ಯಾಧಿಕಾರಿ ಧರಣೇಂದ್ರಕುಮಾರ, ಸದಸ್ಯರಾದ ಜ್ಯೋತಿ ಛಲವಾದಿ, ಮಹಾಂತೇಶ ಕಲಬಾವಿ, ಸೈಯದ್ ಮೈನುದ್ದೀನ್ ಮುಲ್ಲಾ, ಕಲಾವಿದರಾದ ಶರಣಪ್ಪ ವಡಗೇರಿ, ದುರುಗಪ್ಪ ಹಿರೇಮನಿ ಇತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಶರಣೆ ಸತ್ಯಕ್ಕ ಅವರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.