

ಕುಷ್ಟಗಿ: ಹಾವೇರಿ ಜಿಲ್ಲೆ ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಅವ್ಯವಹಾರ ಪ್ರಕರಣದಲ್ಲಿ ಕರ್ತವ್ಯಲೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿ ಡಿ.ಎನ್. ಧರಣೇಂದ್ರಕುಮಾರ್ ಹಾಗೂ ಗುತ್ತಲ ಪಪಂನ ದ್ವಿತೀಯ ದರ್ಜೆ ಸಹಾಯಕ ಗುರಪ್ಪ ಪೂಜಾರರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಟಾದ ಆರ್ಥಿಕ ನಷ್ಟದ 29.92ಲಕ್ಷ ರೂ.ಗಳನ್ನು ಇಬ್ಬರು ಆರೋಪಿತರಿಂದ ವಸೂಲಿ ಮಾಡಿ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಹಾವೇರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
2015-16ರಿಂದ 2017-18ರ ಸಾಲಿನ ವರೆಗಿನ ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ನಿಯಮ ಬಾಹಿರವಾಗಿ 2.53 ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕೈಗೊಂಡ ತನಿಖೆಯಲ್ಲಿ ಕರ್ತವ್ಯಲೋಪ ಸಾಬೀತಾಗಿದೆ. ಶಿಸ್ತು ಪ್ರಕರಣಗಳಲ್ಲಿ ನೀಡಿರುವ ವಿಚಾರಣಾಧಿಕಾರಿಗಳ ವರದಿಯನ್ನು ಒಪ್ಪಿ ಕೆಸಿಎಸ್(ಸಿಸಿಎ) ನಿಯಮಾವಳಿಗಳು 1957ರ ನಿಯಮದನ್ವಯ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಕುಷ್ಟಗಿಯಲ್ಲೂ ಎಡವಟ್ಟು: ಗುತ್ತಲದಿಂದ ಇಲ್ಲಿನ ಪುರಸಭೆಗೆ ವರ್ಗವಾಗಿ ಬಂದ ನಂತರದಲ್ಲಿ ಇಲ್ಲಿಯೂ ಸೇವೆಗೆ ಅನಧಿಕೃತ ಗೈರು, ಅಭಿವೃದ್ಧಿಪಡಿಸದ ಲೇಔಟ್‌ಗಳಲ್ಲಿನ ನಿವೇಶನಗಳ ಮಾರಾಟಕ್ಕೆ ಅನುಮತಿ, ಟೆಂಡರ್ ನಿಯಮಗಳ ಉಲ್ಲಂಘನೆ ಸೇರಿ ನಾನಾ ರೀತಿಯ ಲೋಪ ಎಸಗಿದ್ದ ಧರಣೇಂದ್ರಕುಮಾರ್ ಅವರ ತಲೆದಂಡ ಕೊನೆಗೂ ಆದಂತಾಗಿದೆ.