ಕ್ರಿಮಿನಲ್ ಕೇಸ್ ದಾಖಲಿಸುವಂತೆ ಜಿಪಂ ಸಿಇಒಗೆ ಪತ್ರ

220121 Kushtagi Homminala Water Bill Bogus Case Followup
ಜಿಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಭೋಲಾ ಸಿಇಒಗೆ ಬರೆದ ಪತ್ರ.
Published on

ಕುಷ್ಟಗಿ: ತಾಲೂಕಿನ ಹೊಮ್ಮಿನಾಳ ಸಹಿಪ್ರಾಶಾಲೆಯ ನೀರು ಪೂರೈಕೆಯ ಕಾಮಗಾರಿಯಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯವತಿ ಭೋಲಾ ಜಿಪಂ ಸಿಇಒಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ಸದರಿ ಕಾಮಗಾರಿಯನ್ನು ಗುತ್ತಿಗೆದಾರ ರಾಜೇಸಾಬ್ ವಾಲಿಕಾರ ಎನ್ನುವವರು ನಿರ್ವಹಿಸಲು ಒಪ್ಪಂದವಾಗಿ ನಂತರ ಕಾಮಗಾರಿ ಪೂರ್ಣಗೊಂಡ ಬಗ್ಗೆ ಬಿಲ್ ದಾಖಲಿಸಿ ಕಾಮಗಾರಿಯ ಫೋಟೋಗಳೊಂದಿಗೆ ದೃಢೀಕರಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಈ ವಿಚಾರ ಕುರಿತು ಶಾಲೆಗೆ ತೆರಳಿ ಸ್ಥಳ ಪರಿಶೀಲನೆ ಮಾಡಿದಾಗ ಅಲ್ಲಿ ಯಾವುದೇ ಬೋರ್ ವೆಲ್ ಕೊರೆಯಿಸಿರುವ ಹಾಗೂ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳದಿರುವುದು ಕಂಡುಬಂದಿದೆ.

ಶಾಲೆ ಗ್ರಾಮದ ಹೊರವಲಯದಲ್ಲಿರುವುದರಿಂದ ಮಕ್ಕಳು ಕುಡಿವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ನೀರು ಪೂರೈಸುವ ಬದಲು ಗುತ್ತಿಗೆದಾರರೊಂದಿಗೆ ಶ್ಯಾಮೀಲಾಗಿ ದಾಖಲೆಗಳನ್ನು ದೃಢೀಕರಿಸಿ ಹಣ ಪಾವತಿಸಿರುವ ಅಧಿಕಾರಿಗಳು ಸರ್ಕಾರಕ್ಕೆ ವಂಚಿಸಿ ಹಣ ಲೂಟಿ ಮಾಡಿದ್ದಾರೆ. ಕೂಡಲೇ ಸಂಬಂಧಿಸಿದ ವರದಿ ತರಿಸಿಕೊಂಡು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಿನಲ್ ಕೇಸ್ ದಾಖಲಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ವಿಜಯವಾಣಿ ‘ನೀರು ಪೂರೈಕೆಯಲ್ಲಿ ಅವ್ಯವಹಾರ’ ಶೀರ್ಷಿಕೆಯಡಿ ಜ.20 ರಂದು ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net