

ರೆಡ್‌ಕ್ರಾಸ್ ಸಹಯೋಗದಲ್ಲಿ ಶಿಬಿರ ಆಯೋಜನೆ
ಕುಷ್ಟಗಿ: ರಕ್ತದಾನ ಮಾಡುವುದರಿಂದ ದೇಹಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುವುದಿಲ್ಲ. ಯಾವುದೇ ಹಿಂಜರಿಕೆ ಇಲ್ಲದೆ ರಕ್ತದಾನ ಮಾಡುವಂತೆ ತಹಸೀಲ್ದಾರ್ ಎಂ.ಸಿದ್ದೇಶ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿ ಮಾತನಾಡಿದರು. ಹೆರಿಗೆ ಸಮಯದಲ್ಲಿ ರಕ್ತಸ್ರಾವ, ಅಪಘಾತ ಹಾಗೂ ರಕ್ತಹೀನತೆ ಪ್ರಕರಣಗಳಲ್ಲಿ ರಕ್ತದ ಅಗತ್ಯತೆ ಹೆಚ್ಚಿರುತ್ತದೆ. ದಾನಿಗಳು ನೀಡುವ ರಕ್ತ ತುರ್ತು ಸಂದರ್ಭಗಳಲ್ಲಿ ನೆರವಾಗುತ್ತದೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ ಮಾತನಾಡಿ, ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಕೊನೆಯ ಸೋಮವಾರ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.