ಬಿಜೆಪಿ ಸರ್ಕಾರದ ಅಭಿವೃದ್ಧಿ ಬಗ್ಗೆ ಶ್ವೇತಪತ್ರ ಹೊರಡಿಸಲಿ; ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಆಗ್ರಹ

31052021 Kustagi MLA Food Kit distribute
Published on

ಕುಷ್ಟಗಿಯಲ್ಲಿ ಆಹಾರ ಸಾಮಗ್ರಿ ಕಿಟ್ ವಿತರಣೆ

ಕುಷ್ಟಗಿ: ದೇಶದ ಕಳೆದ ಏಳು ದಶಕಗಳ ಸಾಧನೆಯನ್ನೇ ಬಿಜೆಪಿಯವರು ಮೋದಿ ಸರ್ಕಾರದ ಏಳು ವರ್ಷಗಳ ಸಾಧನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಶಾಸಕ ಅಮರೇಗೌಡ ಬಯ್ಯಪುರ ಟೀಕಿಸಿದರು.

ಪಟ್ಟಣದ ಶರೀಫ್ ನಗರದಲ್ಲಿ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಸೋಮವಾರ ಮಾತನಾಡಿದರು. ಬಿಜೆಪಿ ನಾಯಕರು ಚೆನ್ನಾಗಿ ಮಾತನಾಡಿ ಜನರನ್ನು ಯಾಮಾರಿಸುವ ಕಲೆ ಹೊಂದಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಆಗಿರುವ ಕೆಲಸಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಲಾಕ್‌ಡೌನ್ ಮಾಡಿದ್ದರೂ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸೋಂಕು ತಡೆಗೆ ಸೂಕ್ತ ಕ್ರಮಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಸಬಲರಾದವರು ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕಿದೆ. ಪಟ್ಟಣದಲ್ಲಿ 3500 ಕಿಟ್ ವಿತರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕಿಟ್ ವಿತರಿಸುವ ಉದ್ದೇಶವಿದೆ ಎಂದು ಶಾಸಕ ಬಯ್ಯಪುರ ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಮಾಜಿ ಶಾಸಕ ಹಸನ್ ಸಾಬ್ ದೋಟಿಹಾಳ, ಪುರಸಭೆ ಸದಸ್ಯರಾದ ನಾಗರಾಜ ಹಿರೇಮಠ, ಮೈನುದ್ದೀನ್ ಮುಲ್ಲಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net