ನಂಬರ್ ಪ್ಲೇಟ್ ಇಲ್ಲದೆ ಸಂಚಾರ: ಕುಷ್ಟಗಿಯಲ್ಲಿ ನೂರಕ್ಕೂ ಹೆಚ್ಚು ಬೈಕ್ ಸವಾರರಿಗೆ ಖಾಕಿ ದಂಡಾಸ್ತ್ರ

28112022 kustagi bike riders fine
Published on

ಕುಷ್ಟಗಿ: ನಂಬರ್ ಪ್ಲೇಟ್ ಇಲ್ಲದ ಹಾಗೂ ನೋಂದಣಿ ಮಾಡಿಸದ ಬೈಕ್‌ಗಳ ತಪಾಸಣೆಗೆ ಇಳಿದ ಸ್ಥಳೀಯ ಪೊಲೀಸರು ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಹಾಗೂ ಪಿಎಸ್‌ಐ ಮೌನೇಶ ರಾಠೋಡ್ ನೇತೃತ್ವದ ಸಿಬ್ಬಂದಿ ಪಟ್ಟಣದ ವಿವಿಧ ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಬೈಕ್‌ಗಳನ್ನು ತಡೆದು ತಪಾಸಣೆ ನಡೆಸಿ ಅಗತ್ಯ ದಾಖಲೆ ಇಲ್ಲದ 100ಕ್ಕೂ ಹೆಚ್ಚು ಬೈಕ್‌ಗಳನ್ನು ಗೂಡ್ಸ್ ವಾಹನದಲ್ಲಿ ಠಾಣೆಗೆ ಕೊಂಡೊಯ್ದು ದಂಡ ವಿಧಿಸಿದರು. ಅಲ್ಲದೆ ನಂಬರ್ ಪ್ಲೇಟ್ ಇಲ್ಲದೆ ಬೈಕ್ ಓಡಿಸದಂತೆ ತಾಕೀತು ಮಾಡಿದರು.

ಪಟ್ಟಣದಲ್ಲಿ ಬೈಕ್, ಇತರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದ್ದು, ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಬೈಕ್‌ಗಳಲ್ಲಿ ಮೂರ‌್ನಾಲ್ಕು ಜನ ಹೋಗುವುದು, ಅಪ್ರಾಪ್ತರು ಯರ‌್ರಾಬಿರ‌್ರಿ ಗಾಡಿ ಓಡಿಸುವುದು, ಖಾಸಗಿ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕರೆದೊಯ್ಯುವಂತಹ ದೃಶ್ಯ ಸಾಮಾನ್ಯವಾಗಿದ್ದು, ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ.

ಎಸ್ಪಿ ಆದೇಶದ ಮೇರೆಗೆ ಕಾರ್ಯಾಚರಣೆ ನಡೆಸಿ ನಂಬರ್ ಪ್ಲೇಟ್ ಇಲ್ಲದ ಹಾಗೂ ನೋಂದಣಿ ಮಾಡಿಸದ ನೂರಕ್ಕೂ ಹೆಚ್ಚು ಬೈಕ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ. ಇದು ಮರುಕಳಿಸಿದರೆ ಬೈಕ್ ಜಪ್ತಿ ಮಾಡಲಾಗುವುದು.| ನಿಂಗಪ್ಪ ರುದ್ರಪ್ಪಗೋಳ ಸಿಪಿಐ, ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net