

ಕುಷ್ಟಗಿ: ಸ್ವಾತಂತ್ರ್ಯ ಹೋರಾಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಲವರ ತ್ಯಾಗ ಬಲಿದಾನವಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ , ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೀಮಜ್ಜ ಮುರಡಿ ಅವರ 69ನೇ ಪುಣ್ಯತಿಥಿ ಹಾಗೂ ಪುಂಡಲೀಕಪ್ಪ ಜ್ಞಾನಮೋಟೆ ಅವರ 12ನೇ ಪುಣ್ಯಸ್ಮರಣೆ ನಿಮಿತ್ತ ಪಟ್ಟಣದ ಬಸವ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾತಪಸ್ವಿಯಾಗಿದ್ದ ಮುರಡಿ ಭೀಮಜ್ಜನವರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಅವರ ಹಾದಿಯಲ್ಲಿ ನಡೆದ ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಟೆ ಸಹ ಭೀಮಜ್ಜನವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸ್ವಾತಂತ್ರೃ ಹೋರಾಟದಲ್ಲಿ ಭಾಗವಹಿಸಿದ್ದರು. ಅಂತಹ ವ್ಯಕ್ತಿಗಳ ಸ್ಮರಣೆ ಮಾಡುವ ಅಗತ್ಯವಿದೆ ಎಂದರು.
ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳನ್ನು ಗೌರವಿಸುವ ಕಾರ್ಯವಾಗಬೇಕಿದೆ. ಅವರ ಹೋರಾಟದ ಜೀವನದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದರ ಜತೆಗೆ ಅವರ ಆಚಾರ-ವಿಚಾರ, ನಡೆ-ನುಡಿಗಳನ್ನು ಅನುಸರಿಸುವ ಕಾರ್ಯ ಮಾಡಬೇಕಿದೆ. ಇಂದಿನ ಮಕ್ಕಳು ಹಾಗೂ ಯುವಕರಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಣದ ಜತೆಗೆ ಸಂಸ್ಕಾರ ಕೊಡಿಸುವ ಕಾರ್ಯವಾಗಬೇಕಿದೆ ಎಂದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ ಮಾತನಾಡಿದರು. ಹರಿಭಕ್ತ ಪಾರಾಯಣ ಸಂತರಾದ ಕ್ಷೇತ್ರ ಪಂಢರಾಪುರದ ಪ್ರಭಾಕರ ಬೋದಲೆ ಮಹಾರಾಜ, ಯಶವಂತ ಬೋದಲೆ ಮಹಾರಾಜ, ರಮೇಶ ಬೋಂದಾಡೆ, ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಪ್ರಮುಖರಾದ ವೀರೇಶ ಬಂಗಾರಶೆಟ್ಟರ್, ಅಮೃತರಾಜ ಜ್ಞಾನಮೋಟೆ, ಪರಶುರಾಮ ಜ್ಞಾನಮೋಟೆ, ಶಿವಪ್ಪ ನೀರಾವರಿ, ರಮೇಶ ಕಾಪ್ಸೆ, ಅಪ್ಪಣ್ಣ ನಲವೆ ಇತರರು ಇದ್ದರು.
ಕುಷ್ಟಗಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಫ್ಲೈಓವರ್‌ಗೆ ಪುಂಡಲೀಕಪ್ಪ ಜ್ಞಾನಮೋಟೆ ಹೆಸರಿಡುವಂತೆ ಒತ್ತಾಯಿಸಿ ಭಾವಸಾರ ಬಂಧು ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಮನವಿ ಸಲ್ಲಿಸಿದರು.