

ಕುಷ್ಟಗಿ: ರಸ್ತೆ, ಚರಂಡಿ ನಿರ್ಮಿಸುವ ನೆಪದಲ್ಲಿ ನೆಲಸಮಗೊಳಿಸಿದ್ದ ಬಸವಭವನದ ಕಾಂಪೌಂಡ್ ಹಾಗೂ ಶೌಚಗೃಹಗಳನ್ನು ನಿರ್ಮಿಸಿಕೊಡಲು ಒತ್ತಾಯಿಸಿ ಬಸವ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಪಟ್ಟಣದ ಪುರಸಭೆ ಅಧ್ಯಕ್ಷ ಮಹಾಂತೇಶ್ ಕಲಬಾವಿಗೆ ಮಂಗಳವಾರ ಮನವಿ ಸಲ್ಲಿಸಿದರು.
\ಬಸವ ಭವನಕ್ಕೆ ಹೊಂದಿಕೊಂಡು ರಸ್ತೆ ಹಾಗೂ ಚರಂಡಿ ನಿರ್ಮಿಸುವುದಾಗಿ ಹೇಳಿ ಭವನದ ಪೂರ್ವ ದಿಕ್ಕಿನಲ್ಲಿದ್ದ ಕಾಂಪೌಂಡ್ ಹಾಗೂ ಎರಡು ಶೌಚಗೃಹಗಳನ್ನು ಪುರಸಭೆಯಿಂದ ತೆರವುಗೊಳಿಸಲಾಗಿದೆ. ಕಾಮಗಾರಿ ವೇಳೆ ಆಕ್ಷೇಪ ವ್ಯಕ್ತಪಡಿಸಿದಾಗ ಕಾಂಪೌಂಡ್ ಹಾಗೂ ಶೌಚಗೃಹಗಳನ್ನು ನಿರ್ಮಿಸಿ ಕೊಡುವುದಾಗಿ ಹೇಳಿದ್ದರು. ನಾಲ್ಕು ವರ್ಷಗತಿಸಿದರೂ ನಿರ್ಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಪೌಂಡ್ ಇಲ್ಲದ ಕಾರಣ ಸಾರ್ವಜನಿಕರು ಭವನದ ಆವರಣದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಲ್ಲದೆ ಕುಡುಕರ ಹಾವಳಿಯೂ ಹೆಚ್ಚಾಗಿದೆ. ಕೂಡಲೇ ಕಾಂಪೌಂಡ್ ಹಾಗೂ ಶೌಚಗೃಹಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಜೆ. ಶರಣಪ್ಪ, ಎಸ್.ಸಿ. ಪಾಟೀಲ್, ಜಿ.ಡಿ ಪಾಟೀಲ್ ಇತರರಿದ್ದರು.