

ಕುಷ್ಟಗಿ: ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಇಲ್ಲಿನ ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗೆ ಬರೆದ ಪತ್ರವನ್ನು ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರಗೆ ಸಲ್ಲಿಸಿದರು.
ಸಂಘದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ವಕೀಲರು, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸಿಲ್ ಕಚೇರಿ ತಲುಪಿ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ವಿಜಯಮಹಾಂತೇಶ ಕುಷ್ಟಗಿ ಮಾತನಾಡಿ, ವಕೀಲರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಚಿಕ್ಕಮಗಳೂರಿನ ವಕೀಲ ಪ್ರೀತಮ್ ಎನ್ನುವವರ ಮೇಲೆ ಇತ್ತೀಚೆಗೆ ಪೊಲೀಸರು ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡಬೇಕು. ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲರಾದ ಆರ್.ಕೆ.ದೇಸಾಯಿ, ಅಮರೇಗೌಡ ಪಾಟೀಲ್, ಎಚ್.ಬಿ.ಕುರಿ ಮಾತನಾಡಿ, ಪೊಲೀಸರು ಜನಸಾಮಾನ್ಯರಲ್ಲದೇ ಎಲ್ಲ ವರ್ಗದವರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ದೂರಿದರು.
ಕಚೇರಿಯಲ್ಲಿದ್ದ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಸ್ಥಳಕ್ಕೆ ಬರುವುದು ತಡವಾಗಿದ್ದಕ್ಕೆ ವಕೀಲರು ಅವರ ವಿರುದ್ಧವೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರು. ಸಂಘದ ಉಪಾಧ್ಯಕ್ಷ ಶಿವಕುಮಾರ ದೊಡ್ಡಮನಿ, ಕಾರ್ಯದರ್ಶಿ ಬಸವರಾಜ ಲಿಂಗಸೂರು, ಜಂಟಿ ಕಾರ್ಯದರ್ಶಿ ಮೈನುದ್ದೀನ್ ಮುಲ್ಲಾ, ಎಚ್.ಆರ್.ನಾಯಕ್, ಶಂಕರಗೌಡ ಪಾಟೀಲ್, ಬಿ.ಬಸವರಾಜ, ಕೆ.ಎಂ.ಪಾಟೀಲ್, ಎಂ.ಬಿ.ಕೊನಸಾಗರ, ಆರ್.ವೈ.ಮೂಲಿಮನಿ, ರಾಜು ಪಾಟೀಲ್, ಬಸವರಾಜ ಇದ್ಲಾಪುರ, ಹುಲಗಪ್ಪ ಚೂರಿ, ನಾಗರಾಜ ಉಪ್ಪಾರ, ಎ.ಎಚ್.ಪಲ್ಲೇದ್ ಇತರರಿದ್ದರು.