ಸಮರ್ಪಕ ಕೂಲಿ ಪಾವತಿಗೆ ಆಗ್ರಹ: ಗುಮಗೇರಾ ಗ್ರಾಪಂ ಎದುರು ನರೇಗಾ ಕಾರ್ಮಿಕರ ಪ್ರತಿಭಟನೆ

140722 Nagarahala Labors Protest
ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಪಂ ಎದುರು ನಾಗರಾಳದ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.
Published on

ಕುಷ್ಟಗಿ: ಸಮರ್ಪಕ ಕೂಲಿ ಪಾವತಿಗೆ ಆಗ್ರಹಿಸಿ ತಾಲೂಕಿನ ನಾಗರಾಳದ ನರೇಗಾ ಕೂಲಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಗುರುವಾರ ಗುಮಗೇರಾ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ನಿರ್ವಹಿಸಿರುವ 42 ಕಾರ್ಮಿಕರಿಗೆ ಈವರೆಗೆ ಕೂಲಿ ಪಾವತಿಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ತಾಂತ್ರಿಕ ದೋಷದ ಕಾರಣ ಹೇಳುತ್ತಿದ್ದಾರೆ. ಇನ್ನುಳಿದವರಿಗೆ ಕೂಲಿ ಪಾವತಿಯಾದರೂ ಸರ್ಕಾರ ನಿಗದಿಪಡಿಸಿರುವ ಮೊತ್ತಕ್ಕಿಂತ ಕಡಿಮೆ ಸಂದಾಯವಾಗಿದೆ ಎಂದು ದೂರಿದರು.

ರೈತ ಮುಖಂಡ ಆರ್.ಕೆ. ದೇಸಾಯಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿರುವ ಕೂಲಿ, ಕಾರ್ಮಿಕರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಅದರಲ್ಲೂ ಕಡಿತಗೊಳಿಸಿ ಹಣ ನೀಡುತ್ತಿರುವುದು ಸರಿಯಲ್ಲ. ಕೆಲಸಕ್ಕೆ ತಕ್ಕ ಕೂಲಿ ನೆಪ ಮಾತ್ರಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಲಿಕಾರರಾದ ಹುಲಿಗೆಮ್ಮ ಗೌಡ್ರ, ಶಿವಮ್ಮ ಗುಮಗೇರಿ, ಅಮರೇಶ ತಳವಾರ, ಯಮನೂರಪ್ಪ ಕನಸಾವಿ, ಬಾಳಮ್ಮ ಯಲಬುರ್ತಿ, ಗಂಗಮ್ಮ ಅಳ್ಳಳ್ಳಿ, ಮುತ್ತಪ್ಪ ತಳವಾರ, ಶರಣಪ್ಪ ಅಳ್ಳಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net