ಕುಶಾಲನಗರದಲ್ಲಿ ಕುಶಲೋತ್ಸವ ಕಾರ್ಯಕ್ರಮ

kushalotsava
Published on

ಮಡಿಕೇರಿ:

ಕುಶಾಲನಗರಕ್ಕೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಮಂಜೂರು ಮಾಡಲಾಗುವುದು. ಈ ಬಜೆಟ್‌ನಲ್ಲೇ ಇದನ್ನು ಸೇರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕೊಡಗು ಜಿಲ್ಲೆ ಕನ್ನಡ ಸಿರಿ ಸ್ನೇಹ ಬಳಗದಿಂದ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ 50ನೇ ಕಾರ್ಯಕ್ರಮವಾಗಿ ಕುಶಾಲನಗರದಲ್ಲಿ ಮಂಗಳವಾರ ನಡೆದ ಕುಶಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೊನ್ನಂಪೇಟೆಗೆ ಈಗ ಸಮಯದಾಯ ಆರೋಗ್ಯ ಕೇಂದ್ರ ಕೊಡಲಾಗುವುದು. ನಂತರ ತಾಲೂಕು ಆಸ್ಪತ್ರೆ ಮಂಜೂರು ಮಾಡಲಾಗುವುದು. ನಮ್ಮ ಊರಿಗೆ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಹೊಸ ವಿವಿಗಳು ಸರಿಯಾಗಿ ನಡೆಯುತ್ತಿಲ್ಲ ಹಾಗಾಗಿ ನಮ್ಮಲ್ಲಿಗೆ ಬೇಡ ಎಂದು ಹೆಚ್ಚಿನ ಕಡೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಕೊಡಗಿನ ಸ್ಥಿತಿ ವಿಭಿನ್ನವಾಗಿದೆ. ಕೊಡಗು ವಿವಿ ಉಳಿಯಬೇಕು ಎನ್ನುವ ಬೇಡಿಕೆ ಇಲ್ಲಿ ಇದೆ. ಜನಪ್ರತಿನಿಧಿಯಾಗಿ ಜನರ ಧ್ವನಿಗೆ ಬೆಲೆ ಕೊಡುವುದು ನನ್ನ ಕರ್ತವ್ಯ ಎಂದರು.

ಸAಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಿಸಲು ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ಕೊಡುತ್ತಿರುವ ಕೊಡಗು ವಿವಿ ಉಳಿಸುವುದು ಇಂದಿನ ಅಗತ್ಯವಾಗಿದೆ. ಇದಕ್ಕೆ ನನ್ನ ಕಡೆಯಿಂದ ಎಲ್ಲಾ ಸಹಕಾರ ಕೊಡಲಾಗುವುದು. ಸ್ಥಳೀಯರಿಗೆ ಈ ಸಂಸ್ಥೆಯಿAದ ಸಾಕಷ್ಟು ಅನುಕೂಲ ಇದೆ. ಕೊಡಗು ವಿವಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಮೂಲಕವೂ ಸಾಧ್ಯವಿರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕುಶಾಲನಗರಕ್ಕೆ ಜೀವ ಮತ್ತು ಜೀವನ ಕೊಟ್ಟವರು ಗುಂಡೂರಾವ್. ಇವರನ್ನು ಯಾವ ಕಾಲಕ್ಕೂ ಮರೆಯಬಾರದು. ಅವರ ಪುತ್ರ ದಿನೇಶ್ ಗುಂಡೂರಾವ್ ಬಗ್ಗೆಯೂ ಸ್ಥಳೀಯರಿಗೆ ದೊಡ್ಡ ನಿರೀಕ್ಷೆ ಇದೆ. ಕೊಡಗು ವಿವಿ ಮುಚ್ಚುವ ಬಗ್ಗೆ ಸಚಿವ ಸಂಪುಟ ಉಪಸಮಿತಿ ವರದಿಯನ್ನು ಕ್ಯಾಬಿನೆಟ್‌ನಲ್ಲಿ ತಿರಸ್ಕರಿಸುವ ಕೆಲಸ ಸಚಿವ ದಿನೇಶ್ ಗುಂಡೂರಾವ್ ಮಾಡಬೇಕು ಎಂದರು.

ಕೂಡಿಗೆಗೆ ಕ್ರೀಡಾ ಶಾಲೆ ತಂದ ಗುಂಡೂರಾಯರ ಹೆಸರನ್ನು ಆ ಶಾಲೆಗೆ ಇಡುವಂತಾಗಬೇಕು ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಕುಶಾಲನಗರದ ಪ್ರಗತಿಗೆ ಶ್ರಮಿಸಿದವರನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಾರಂಗಿ ಅಣೆಕಟ್ಟೆ ಕಟ್ಟಿದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಪುತ್ರ ಕೈಲಾಶನಾಥ ವೀರೇಂದ್ರಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್ ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನೀರು ಬಳಕೆದಾರರ ಮಹಾಮಂಡಲ ಅಧ್ಯಕ್ಷ ಚೌಡೇಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು, ಸಹಕಾರಿ ಧುರಿಣ ಶರವಣ ಕುಮಾರ್, ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ

ಎಂ.ಕೆ. ದಿನೇಶ್, ಕನ್ನಡ ಸಿರಿ ಸ್ನೇಹ ಬಳಗ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ನಿವೃತ್ತ ಶಿಕ್ಷಕ ಉ.ರಾ. ನಾಗೇಶ್, ಶಿಕ್ಷಕಿ ಗಾಯತ್ರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net