

ಕುಶಾಲನಗರ:
ನಮ್ಮ ದೇಶದ ಸಂವಿಧಾನ ಜನಾಂಗ, ಜಾತಿ, ಮತ, ಭಾಷೆ, ಪ್ರದೇಶ ಎಂಬ ಮಿತಿಗಳನ್ನು ಮೀರಿ ಎಲ್ಲರಿಗೂ ಸಮಾನ ಹಕ್ಕು, ಸ್ವಾತಂತ್ರ‍್ಯ ಹಾಗೂ ಹಿತರಕ್ಷಣೆ ನೀಡಿದೆ ಎಂದು ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಹೇಳಿದರು. ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗಣರಾಜ್ಯೋತ್ಸವ ದಿನವನ್ನು ಇಡೀ ದೇಶವೇ ಸಂಭ್ರಮಿಸುತ್ತದೆ. ಗಣರಾಜ್ಯೋತ್ಸವ ಆಚರಣೆ ಸುವರ್ಣ ಭಾರತ, ಪರಂಪರೆ ಹಾಗೂ ಪ್ರಗತಿ ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಗಣರಾಜ್ಯದ ನಂತರ ನಮ್ಮ ದೇಶ ಹಲವಾರು ಕ್ಷೇತ್ರಗಳಲ್ಲಿ ಮಹತ್ತರವಾದ ಅಭಿವೃದ್ಧಿ ಕಂಡಿದೆ. ಸಂವಿಧಾನ ದೇಶದ ಭವಿಷ್ಯ ರೂಪಿಸಲು ಮಾರ್ಗದರ್ಶಕವಾಗಿದೆ.
ಸೈನಿಕರು, ರೈತರು, ವಿಜ್ಞಾನಿಗಳು, ಶಿಕ್ಷಕರು, ಶ್ರಮಿಕ ವರ್ಗ ನಮ್ಮ ದೇಶದ ಪ್ರಗತಿಗೆ ಪ್ರೇರಣೆಯ ಚಿಹ್ನೆಗಳಾಗಿದ್ದಾರೆ. ಇವರೆಲ್ಲರ ಸೇವೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ನಾವು ಇಂದು ಏನಾದರೂ ಸಾಧಿಸಿದ್ದೇವೆ ಎಂದರೆ ಅದಕ್ಕೆ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವೇ ಕಾರಣ ಆದ್ದರಿಂದ ಅವರ ಆದರ್ಶಗಳನ್ನು ಅನುಸರಿಸೋಣ ಮತ್ತು ನಮ್ಮ ರಾಷ್ಟ್ರವನ್ನು ವಿಶ್ವದ ಅತ್ಯುತ್ತಮ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸೋಣ ಎಂದರು.
ನಿವೃತ್ತ ಶಿಕ್ಷಣಾಧಿಕಾರಿ ಹೆಚ್.ಡಿ. ಮಂಜುನಾಥ್ ಮುಖ್ಯ ಭಾಷಣಕಾರರಾಗಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಬರೆದ ಭಾರತದ ಸಂವಿಧಾನ ಇಡೀ ವಿಶ್ವದ ಸುಗಮ ಆಡಳಿತ ವ್ಯವಸ್ಥೆಗೆ ದಾರಿದೀಪವಾಗಿದೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಹತ್ತಾರು ಧರ್ಮಗಳು, ನೂರಾರು ಭಾಷೆಗಳು, ಭಿನ್ನ ವಿಭಿನ್ನ ಆಚಾರ - ವಿಚಾರ ಹಾಗೂ ಸಂಸ್ಕೃತಿಗಳು, ಸಾರ್ವಭೌಮ, ಸಮಾಜವಾದಿ ಹಾಗೂ ಜಾತ್ಯತೀತ ತತ್ವಗಳನ್ನು ಅಳವಡಿಸಿಕೊಳ್ಳಲು ಸಂವಿಧಾನ ಎಂಬುದು ಆತ್ಮವಾಗಿದೆ ಎಂದು ಹೇಳಿದರು.
ಡಿವೈಎಸ್‌ಪಿ ಗಂಗಾಧರಪ್ಪ ಬಹುಮಾನ ವಿತರಿಸಿದರು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ತೋಟಗಾರಿಕಾ ಇಲಾಖೆ ಅಧಿಕಾರಿ ವರದರಾಜು, ಕಂದಾಯ ನಿರೀಕ್ಷಕ ಸಂತೋಷ್, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ ಇದ್ದರು.
ಗುಡ್ಡೆಹೊಸೂರಿನ ವಿಜಯವಾಣಿ ವಿತರಕ ಕುಡೆಕಲ್ಲು ಗಣೇಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ ಹಾಗೂ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳ ಪಥಸಂಚಲನ ಗಮನ ಸೆಳೆಯಿತು. ಪಥಸಂಚಲನದ ನೇತೃತ್ವವನ್ನು ಸ್ಟೂಡೆಂಟ್ ಪೊಲೀಸ್ ಅಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ನಡೆಸಿಕೊಟ್ಟರು. ರಾಷ್ಟ್ರಭಕ್ತಿ ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.