ಕುಶಾಲನಗರ : ಕೊಡಗು ಜಿಲ್ಲೆಯಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ವಿಭಿನ್ನ ಸ್ಥಾನ ಪಡೆದಿದೆ. ಇದು ಜಿಲ್ಲೆಯಲ್ಲೇ ಅತಿ ದೊಡ್ಡ ಪಂಚಾಯಿತಿ. ಇದು 5,700 ಜನಸಂಖ್ಯೆ ಹೊಂದಿದೆ. 9ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿ ಪಡೆದಿದೆ. ಹಾಗಾಗಿ ಇದಕ್ಕೆ ಎ ಶ್ರೇಣಿ ಲಭಿಸಿದೆ. ಆದರೂ ಒಂದು ದೊಡ್ಡ ಕೊರತೆ ಕಾಡುತ್ತಿದೆ. ಒಬ್ಬ ಪಿಡಿಒ ಕೂಡಾ ಇಲ್ಲಿ ಕಾಯಂಆಗಿ ಇರಲು ಇಷ್ಟಪಡುತ್ತಿಲ್ಲ. ವರ್ಷದಿಂದ ಕಾಡುತ್ತಿರುವ ಸಮಸ್ಯೆ ಇದು. 2021 ರಲ್ಲಿ ಪಂಚಾಯಿಗೆ ಚುನಾವಣೆ ನಡೆದು 14 ಸದಸ್ಯರು ಅಯ್ಕೆಯಾದರು. ಮೊದಲ ಅವಧಿಗೆ ಎಚ್.ಎಸ್. ಮಂಜುನಾಥ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 2 ನೇ ಅವಧಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅರುಣಕುಮಾರಿ 8 ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾದರು. ಅಲ್ಲಿಂದ ಹೆಬ್ಬಾಲೆ ಪಂಚಾಯಿತಿಗೆ ಶನಿಕಾಟ ಆರಂಭವಾಯಿತು ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ವರ್ಷದ ಹಿಂದೆ ಅರುಣಕುಮಾರಿ ಅಧಿಕಾರ ವಹಿಸಿಕೊಂಡ ನಂತರ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕನಿಷ್ಠ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ ಒದಗಿಸುವಲ್ಲಿಯೂ ವಿಫಲರಾಗಿದ್ದಾರೆ ಎನ್ನುತ್ತಾರೆ ಜನರು. ಕೆಲಸಕ್ಕೆ ಕುತ್ತು ಬರುತ್ತದೆ : ಅಧ್ಯಕ್ಷೆ ಅರುಣ ಕುಮಾರಿ ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯಿಸಿ, ಇಲ್ಲಿಗೆ ಬರುವ ಪಿಡಿಒಗಳನ್ನು ಹೆದರಿಸಿ, ಯಾವುದೇ ರೀತಿಯ ಕೆಲಸಗಳು ಆಗದಂತೆ ವಿರೋಧ ಪಕ್ಷದ ಸದಸ್ಯರು ಚಿತಾವಣೆ ನಡೆಸುತ್ತಿದ್ದಾರೆ. ಇದ್ದ ಪಿಡಿಒಗೂ ಇಲ್ಲಸಲ್ಲದ ಬಿಲ್ಲುಗಳನ್ನು ಸೃಷ್ಟಿ ಮಾಡಿ ಮಾಡಿಕೊಡುವಂತೆ ಒತ್ತಡ ಹಾಕುತ್ತಾರೆ. ಅಂತಹ ಘಟನೆಗಳಿಂದ ಅಧಿಕಾರಿಗಳ ಕೆಲಸಕ್ಕೆ ಕುತ್ತು ಬರುತ್ತದೆ. ಹಾಗಾಗಿ ಇಲ್ಲಿಗೆ ಬರಲು ಎಲ್ಲರೂ ನಿರಾಕರಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಜನಪ್ರತಿನಿಧಿಗಳ ಸ್ವಪ್ರತಿಷ್ಠೆಗೆ ತಕ್ಕಂತೆ ಕೆಲಸ ಮಾಡಲು ಆಗದು ಎಂಬುದು ಪಿಡಿಒಗಳ ದೂರು.