

ಕೆ.ಎಸ್. ನಾಗೇಶ್ ಕುಶಾಲನಗರ
ಅನ್ಯ ರಾಜ್ಯದ ಕಾರ್ಮಿಕರಿಂದ ಸ್ಥಳೀಯ ಲೋಡರ್ಸ್‌ಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಲೋಡರ್ಸ್‌ಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕನ್ನಡದ ನಂಬರ್ ೧ ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿದ್ದ ಕಾಯಕ ಸಮಾಜ ಕಾರ್ಯಕ್ರಮದಲ್ಲಿ ತಮ್ಮ ಅಸಹಾಯಕ ಪರಿಸ್ಥಿತಿ ತೆರೆದಿಟ್ಟರು. ಮೊದಲೇ ಕೆಲಸ ಕಮ್ಮಿಯಾಗಿರುವ ಈ ಸಂದರ್ಭದಲ್ಲಿ ಅನ್ಯ ರಾಜ್ಯದವರ ಹಾವಳಿ ವಿಪರೀತವಾಗಿದೆ. ಅವರು ಬಂದು ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆಂದು ಲೋಡರ್ಸ್‌ಗಳು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದರು.
ಸಿಮೆಂಟ್, ಕಬ್ಬಿಣದ ಅಂಗಡಿಗಳಲ್ಲಿ ವ್ಯಾಪಾರ ಚೆನ್ನಾಗಿ ನಡೆದರೆ ನಮ್ಮ ಜೀವನಕ್ಕೆ ಆಸರೆ. ಹಿರಿಯರು ಬಾರವಾದ ವಸ್ತು ಎತ್ತುವಾಗ ಸೊಂಟ ಹಾನಿಯಾಗಿರುವ ಉದಾಹರಣೆಗಳಿವೆ. ಅಂತಹವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯದೆ, ಸ್ವಂತವಾಗಿ ದುಡಿಯಲು ಸಾಧ್ಯವಾಗದೇ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಸಿಮೆಂಟ್ ಧೂಳು ನಮ್ಮ ಚರ್ಮ ಹಾಳು ಮಾಡುತ್ತವೆ. ಅದು ಗೊತ್ತಿದ್ದರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಧೂಳು ಹೊಟ್ಟೆಯೊಳಗೆ ಸೇರಿಕೊಂಡು ಆರೋಗ್ಯ ಕೆಡುತ್ತದೆ. ಅಲ್ಪಸ್ವಲ್ಪ ಸಂಪಾದನೆಯಲ್ಲೇ ಆಸ್ಪತ್ರೆಗೆ ಖರ್ಚ್ಚು ಮಾಡಿ ಕುಟುಂಬ ನಿರ್ವಹಣೆ ಮಾಡಬೇಕು.
ಕೂಲಿ ಕೆಲಸ ಮಾಡುವ ನಮಗೆ ಸರ್ಕಾರದಿಂದ ಯಾವುದೇ ಭದ್ರತೆಯಿಲ್ಲ. ಕರೊನ ಸಂದರ್ಭದಲ್ಲಿ ಕೆಲಸವಿಲ್ಲದೆ ಆರ್ಥಿಕವಾಗಿ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದಾಗ ಮಿನಿ ಫೈನಾಸ್‌ಗಳಿಂದ ಸಾಲ ಪಡೆದು ಇನ್ನು ತೀರಿಸಲಾಗದೆ ಕಷ್ಟ ಪಡುತ್ತಿದ್ದೇವೆ. ಜನಪ್ರತಿನಿಧಿಗಳು ನೆಪ ಮಾತ್ರಕ್ಕೆ ಕಿಟ್ ಕೊಡುತ್ತೇವೆಂದು ಹೇಳಿಕೊಂಡು ಮಾಧ್ಯಮಕ್ಕೆ ಫೋಸ್ ಕೊಟ್ಟಿದ್ದು ಎಷ್ಟೋ ಅಷ್ಟೇ. ಬಡ ವರ್ಗಕ್ಕೆ ಮಾತ್ರ ಯಾವುದೇ ಸಹಾಯ ಆಗಿಲ್ಲ. ಬೇರೆ ಏನು ಕೆಲಸ ಗೊತ್ತಿಲ್ಲ. ವಿದ್ಯೆಯು ಕಡಿಮೆ ಇರುವುದರಿಂದ ಯಾವುದೇ ಕೆಲಸವು ಸಿಗುವುದಿಲ್ಲ.
ಕುಶಾಲನಗರ ಪುರಸಭೆಯಿಂದ ಲೋಡರ್ಸ್‌ಗಳಿಗೆ ಸೂರು ಕಲ್ಪಿಸಬೇಕು. ಮನೆ ಬಾಡಿಗೆಯಿಂದ ಪಾರಾದರೆ ಕೊಂಚ ನೆಮ್ಮದಿ ಸಿಗುತ್ತೆ ಎಂದಿದ್ದಾರೆ.
ನಮ್ಮ ಈ ಕಷ್ಟಗಳು ನಮಗೆ ಕೋನೆಯಾದರೆ ಚೆಂದ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರೆತು, ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಬರಬೇಕು. ಆ ವಿಚಾರದಲ್ಲಿ ಆದರೂ ಸರ್ಕಾರ, ಜನಪ್ರತಿನಿಧಿಗಳು ಗಮನ ಹರಿಸಿ ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.
**
ಹೋಲ್ ಸೇಲ್ ಅಂಗಡಿ ಎಷ್ಟು ಜಾಸ್ತಿಯಾಗಿದಿಯೋ ಅದರ ಎರಡು ಪಟ್ಟು ಅನ್ಯ ರಾಜ್ಯದವರು ಬಂದು ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಸ್ಥಳೀಯರಿಗೆ ಕೆಲಸವಿಲ್ಲದಂತೆ ಆಗಿದೆ. ಅಂಗಡಿಯವರು, ಸರ್ಕಾರ ಬೇರೆ ರಾಜ್ಯದಿಂದ ವಲಸೆ ಬರುವವರನ್ನು ತಡೆಯ ಬೇಕು. ಇಲ್ಲವಾದರೆ ನಮಗೆ ಜೀವನಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಶಿವ ಮಾದು, ಲೋಡರ್ಸ್, ಜನತಾ ಕಾಲನಿ, ಕುಶಾಲನಗರ.
**
ಕೂಲಿ ಕೆಲಸ ಮಾಡುವ ನಮಗೆ ಮನೆ ಕಟ್ಟಿಕೊಡಬೇಕು. ಕೂಲಿ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಇರುವ ಸಣ್ಣಪುಟ್ಟ ಮನೆ ಗಳ ಬಾಡಿಗೆ ಕಟ್ಟಲು ಹೆಣಗಾಡುವ ಪರಿಸ್ಥಿತಿ ನಮ್ಮದು. ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಏನು ಪ್ರಯೋಜನವಾಗಿಲ್ಲ. ಲೋಕೇಶ್, ಲೋಡರ್ಸ್, ಕುಶಾಲನಗರ.
**
ಚುನಾವಣೆ ಸಂದರ್ಭದಲ್ಲಿ ಓಟು ಕೇಳಲು ಬರುವ ನಾಯಕರು, ಆಮೇಲೆ ನಮ್ಮನ್ನು ಕ್ಯಾರೆ ಎನ್ನುವುದಿಲ್ಲ. ನಾಯಕರು ನೀಡಿದ ಭರವಸೆ, ಕೇವಲ ಭರವಸೆಯಾಗಿಯೇ ಉಳಿದಿದೆ. ಈ ಬಾರಿ ನಮ್ಮ ಬೇಡಿಕೆ ಈಡೇರಿಸುವವರಿಗೆ ನಮ್ಮ ಬೆಂಬಲ. ರಮೇಶ್, ಲೋಡರ್ಸ್, ಕುಶಾಲನಗರ.
**
ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಆಸೆ ಇದ್ದರೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಬಡವರ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಉತ್ತಮ ವಿದ್ಯೆ ಕೊಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಸಬೇಕು. ನಮ್ಮ ಮಕ್ಕಳಿಗೂ ಉತ್ತಮ ಸ್ಥಾನ ದೊರೆಯಬೇಕು. ಶಿವರಾಜ್,
ಲೋಡರ್ಸ್, ಮುಳ್ಳುಸೋಗೆ.
**
ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ವಲಸಿಗರ ಹಾವಳಿ ಇರುವ ರೀತಿಯಲ್ಲೇ ಲೋಡಿಂಗ್ ಕ್ಷೇತ್ರಕ್ಕೂ ಅವರ ಹಾವಳಿ ವಿಪರೀತವಾಗಿದೆ. ಅವರನ್ನು ಸರ್ಕಾರ ನಿಯಂತ್ರಣ ಮಾಡದೇ ಹೋದರೆ ಸ್ಥಳೀಯರು ಉಪವಾಸ ಇರಬೇಕಾಗುತ್ತದೆ. ಅಂಗಡಿ ಮಾಲೀಕರೂ ನಮ್ಮನ್ನು ನಿರ್ಲಕ್ಷ್ಯ ಮಾಡದೆ ನಮ್ಮ ಬೆಂಬಲಕ್ಕೆ ನಿಲ್ಲಬೇಕು. ದರ್ಶನ್, ಲೋಡರ್ಸ್, ಜನತಾ ಕಾಲನಿ.
**
ಕೂಲಿಕೆಲಸ ಕಮ್ಮಿಯಾಗಿ ಬಹಳ ಕಷ್ಟವಾಗಿದೆ. ನಮಗೆ ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿಗೆ ಸಾಲ ಸಿಗಬೇಕು. ರೈತರಿಗೆ ಕೊಡುವ ಎಲ್ಲಾ ಸೌಲಭ್ಯ ನಮಗೂ ನೀಡಬೇಕು. ಸಂಘಗಳಲ್ಲಿ ಪಡೆದಿರುವ ಸಾಲ ತೀರಿಸಲಾಗದೆ ಬೇರೆ ಕಡೆ ಹೆಚ್ಚಿನ ಬಡ್ಡಿಗೆ ಸಾಲ ತರುತ್ತಿದ್ದೇವೆ. ನಮ್ಮ ಗೋಳು ಕೇಳುವವರೇ ಇಲ್ಲ. ಮೋಹನ, ಲೋಡರ್ಸ್, ಕುಶಾಲನಗರ.