ಗಿಡಮೂಲಿಕೆ ಬಳಕೆ ಬಗ್ಗೆ ಅರಿವು ಅತ್ಯಗತ್ಯ

30mdkn1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ನಮ್ಮ ಸುತ್ತಮುತ್ತಲ ಪರಿಸರದಲ್ಲಿರುವ ಗಿಡಮೂಲಿಕೆ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕೆಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.

ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಹಾಗೂ ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಕೊಡಗು ಅರಣ್ಯ ವೃತ್ತದ ಸಹಕಾರದಲ್ಲಿ ಕುಶಾಲನಗರ ಅರಣ್ಯ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಔಷಧಿ ಸಸ್ಯಗಳ ಕುರಿತು ಅರಣ್ಯಾಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂದಿಯ ಸಾಮರ್ಥ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಸಾಕಷ್ಟು ವನ್ಯಸಂಪತ್ತು ಇದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹಲವು ಬಗೆಯ ಗಿಡಮೂಲಿಕೆಗಳು ಇವೆ. ಅವುಗಳ ಬಳಕೆ ಬಗ್ಗೆ ಜನರಿಗೆ ಅರಿವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ, ಅವುಗಳ ಬಳಕೆ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕೆಂದರು.

ಕೊಡಗಿನಲ್ಲಿ ನಾಟಿ ವೈದ್ಯರು ಮತ್ತು ಗಿರಿಜನರು ಗಿಡಮೂಲಿಕೆ ಸಂಗ್ರಹಿಸುತ್ತಾರೆ. ಆದರೆ ಅದರ ಮಹತ್ವದ ಬಗ್ಗೆ ಅವರಿಗೆ ತಿಳಿದಿಲ್ಲ. ಹೊರ ರಾಜ್ಯದವರು ಅದನ್ನು ಖರೀದಿಸುತ್ತಾರೆ. ಸ್ಥಳೀಯರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.

ಕಾವೇರಿ ನದಿ ಪಾತ್ರದಲ್ಲಿ ಸಾಕಷ್ಟು ಜೀವ ವೈವಿಧ್ಯ ಇದೆ. ನದಿ ಸಂರಕ್ಷಣೆ ಮತ್ತು ಜೀವ ವೈವಿಧ್ಯ ಉಳಿವಿಗೆ ಮಂಡಳಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಸಂಘ- ಸಂಸ್ಥೆ ಪ್ರಮುಖರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಯೋಜನೆಗೆ ಅಂತಿಮ ರೂಪ ನೀಡಲಾಗುವುದೆಂದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮಾತನಾಡಿ, ಇಂದಿನ ದಿನದಲ್ಲಿ ಆಹಾರ ಪದ್ಧತಿಯಲ್ಲಿ ಬಹಳ ಬದಲಾವಣೆ ಆಗಿದೆ. ನಾವು ಸೇವಿಸುವ ಗಾಳಿ, ಆಹಾರ, ನೀರು ಯಾವುದೂ ಶುದ್ಧವಾಗಿಲ್ಲ. ಅವುಗಳು ಸುಧಾರಿಸಬೇಕಾದರೆ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಅಪರೂಪದ ಜೀವ ವೈವಿಧ್ಯ ಗಳ ಸಂರಕ್ಷಣೆ ಆಗಬೇಕಿದೆ. ಸ್ವಂತ ಜಮೀನಿನಲ್ಲಿ ಗಿಡಮೂಲಿಕೆ ಬೆಳೆಯುವ ವಿಚಾರದಲ್ಲಿ ಉತ್ತೇಜನದ ಅಗತ್ಯವಿದೆ ಎಂದು ಹೇಳಿದರು.

ಕರ್ನಾಟಕ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎ. ಸುದರ್ಶನ್ ಮಾತನಾಡಿ, ಹಳೆಯ ಆಯುರ್ವೇದ ಪದ್ಧತಿ ಇಂದು ಮುಂಚೂಣಿಗೆ ಬಂದಿದೆ. ಹೀಗಾಗಿ ಗಿಡಮೂಲಿಕೆಗಳ ಬೇಡಿಕೆ ಹೆಚ್ಚಾಗಿದೆ. ಔಷಧಿ ಗಿಡಗಳ ಬಗ್ಗೆ ಜನ ತಿಳಿದುಕೊಳ್ಳಬೇಕು. ಜೀವ ವೈವಿಧ್ಯ ಇಲ್ಲದಿದ್ದರೆ ಗಿಡಮೂಲಿಕೆಗಳ ಉತ್ಪಾದನೆ ಸಾಧ್ಯವಿಲ್ಲ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ವೇದಿಕೆಯಲ್ಲಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಪಿ. ಚಂದ್ರಶೇಖರ್, ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಂ ಬಾಬು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಇದ್ದರು. ಪ್ರಸನ್ನ ಕುಮಾರ್ ಪ್ರಾರ್ಥಿಸಿದರು. ಅರುಣ್‌ಕುಮಾರ್ ಸ್ವಾಗತಿಸಿದರು. ಪ್ರಭು ನಿರೂಪಿಸಿದರು. ಕೆ.ಆರ್. ಪ್ರಸನ್ನ ವಂದಿಸಿದರು.

**
ನಾಟಿ ವೈದ್ಯ ಪದ್ಧತಿ ಇತರರಿಗೆ ತಿಳಿಸಿಕೊಡಬಾರದೆಂಬ ತಪ್ಪು ನಂಬಿಕೆ ಹಲವರಲ್ಲಿದೆ. ಈ ಮನಸ್ಥಿತಿ ದೂರಾಗಬೇಕು. ಮುಂದಿನ ದಿನದಲ್ಲಿ ಜೀವ ವೈವಿಧ್ಯ ಮಂಡಳಿಯಿಂದ ನಾಟಿ ವೈದ್ಯರ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗು ವುದು. ನಾಪಂಡ ರವಿ ಕಾಳಪ್ಪ, ಅಧ್ಯಕ್ಷರು, ಕರ್ನಾಟಕ ಜೀವ ವೈಧ್ಯ ಮಂಡಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net