ಜ್ಞಾನ ಬೇಡಲು ಕಾಶಿ ವಿಶ್ವನಾಥನ ಸಾನಿಧ್ಯಕ್ಕೆ ಬನ್ನಿ

25Kush05
Published on

ಕೆ.ಎಸ್. ನಾಗೇಶ್ ಕುಶಾಲನಗರ

ಕುಶಾಲನಗರದ ಹೃದಯ ಭಾಗದಲ್ಲಿ ಗಣಪತಿ ದೇವಾಲಯವಿದ್ದರೆ ಶಿರಭಾಗದಲ್ಲಿ ಕಾಶಿ ವಿಶ್ವನಾಥನ ದೇವಾಲಯವಿದೆ. ಮಾದಪಟ್ಟಣ ಗ್ರಾಮದಲ್ಲಿ ೨೦೨೨ ರ ಮೇ ತಿಂಗಳಲ್ಲಿ ಜೋಡಿ ಬಸವೇಶ್ವರ ದೇವಸ್ಥಾನದ ಸಮೀಪದಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ನಿರ್ಮಾಣ ಮಾಡಿ, ಶಿವನ ದಕ್ಷಿಣಾಭಿಮುಖಕ್ಕೆ ಶಿವನ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ.

ಗ್ರಾಮದಲ್ಲಿ ನೂರಾರು ವರ್ಷ ಇತಿಹಾಸವಿರುವ ಮತ್ತು ಪೂರ್ವ ಕಾಲದಿಂದಲ್ಲೂ ಗ್ರಾಮ ದೇವರಾಗಿರುವ ಜೋಡಿ ಬಸವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕಾಗಿ ಅಷ್ಟಮಂಗಲ ಪ್ರಶ್ನೆ ಇಟ್ಟಾಗ ಅಲ್ಲಿ ಬಂದಿದ್ದು ಇದು ಶಿವನ ಕ್ಷೇತ್ರವೆಂದು. ಅದರಲ್ಲೂ ಕಾಶಿ ವಿಶ್ವನಾಥನ ದೇವಾಲಯ ನಿರ್ಮಾಣ ಮಾಡಬೇಕೆಂಬ ಉತ್ತರ ಬಂತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಹಕಾರದಿಂದ ೯೦ ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಯಿತ್ತು. ೨೦೨೨ ರ ಮೇ ತಿಂಗಳ ೪,೫,೬ ರಂದು ಅದ್ದೂರಿಯಾಗಿ ವಾರಣಾಸಿ ಯಿಂದ ವಿಶೇಷವಾಗಿ ಬಾಣ ಲಿಂಗ ತರಿಸಿ ಪ್ರತಿಷ್ಠಾಪನೆ ಮಾಡಲಾಗಿದೆ.

ಪ್ರತಿ ಹಿಂದು ಕೂಡ ಜೀವನದಲ್ಲಿ ಒಮ್ಮೆಯಾದರೂ ವಾರಣಾಸಿಗೆ ಹೋಗಿ ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕೆನ್ನುತ್ತಾರೆ. ಆದರೆ ಅಲ್ಲಿಗೆ ಹೋಗಿ ದರ್ಶನ ಪಡೆಯಲಾಗದವರು ಇಲ್ಲಿಗೆ ಬಂದು ದರ್ಶನ ಪಡೆದರೆ ಖಂಡಿತ ಅಲ್ಲಿ ಸಿಗುವಷ್ಟೇ ಭಾಗ್ಯ ಇಲ್ಲಿಯೂ ದೊರೆಯುತ್ತೆ. ಪ್ರಚಾರದ ಕೊರತೆಯಿಂದ ಸಾಕಷ್ಟು ಭಕ್ತಾದಿಗಳಿಗೆ ಈ ದೇವಾಲಯದ ಮಹತ್ವ ತಿಳಿದಿಲ್ಲ. ಇಲ್ಲಿಗೆ ಬಂದು ಒಳಿತನ್ನು ಕಂಡ ಭಕ್ತಾಧಿಗಳು ಬಾಯಿಯಿಂದ ಬಾಯಿಯಿಂದ ಈ ಕ್ಷೇತ್ರದ ಮಹಿಮೆ ಬೇರೆಯವರಿಗೆ ತಿಳಿಸುತ್ತಿದ್ದಾರೆ.

ದಕ್ಷಿಣಾ ಮೂರ್ತಿ ಎಂದರೆ ಜ್ಞಾನ ಭಂಡಾರ ಎನ್ನಲಾಗುತ್ತೆ. ಈಶ್ವರ ದಿಗಂಬರ. ಅವನಲ್ಲಿ ಬಂದು ಐಶ್ವರ್ಯ ಸಂಪತ್ತು ಬೇಡಿದರೆ ಸಿಗುವುದಿಲ್ಲವೇನೋ. ಆದರೆ ಜ್ಞಾನ ಬೇಡಿದರೆ ಖಂಡಿತ ದಯಾಪಾಲಿಸುತ್ತಾನೆ ಎನ್ನುವುದು ಈಗಾಗಲೇ ರುಜುವಾತು ಆಗಿದೆ ಎನ್ನುತ್ತಾರೆ ಕಾಶಿ ವಿಶ್ವನಾಥ ದೇವಾಲಯ ಅರ್ಚಕ ಪರಮೇಶ್ವರ ಭಟ್.

**
ಹುಣ್ಣಿಮೆ ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜೊತೆಗೆ ಸತ್ಯನಾರಾಯಣ ಪೂಜೆ ನಡೆಸಲಾಗುತ್ತದೆ. ಆಡಳಿತ ಮಂಡಳಿಯ ೧೦ ಜನರ ಕುಟುಂಬ ಪ್ರತಿದಿನ ದೇವಸ್ಥಾನದ ಸ್ವಚ್ಛತೆಗೆ ಮತ್ತು ದಿನದ ಪೂಜೆಗೆ ಬೇಕಾದ ಸಾಮಗ್ರಿ ನೀಡುತ್ತೇವೆ. ಈ ಜವಾಬ್ದಾರಿ ನಡೆಸುತ್ತ ಬಂದ ಮೇಲೆ ನಮ್ಮ ಇಡೀ ಕುಟುಂಬ ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದೇವೆ. ದಾಮೋದರ್, ನಿರ್ದೇಶಕರು, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ, ಮಾದಪಟ್ಟಣ.

**
ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ನಿರ್ಮಾಣ ಮಾಡುವ ಮೊದಲು ಈ ಸ್ಥಳದಲ್ಲಿ ೪೦೦ ವರ್ಷ ಹಳೆಯ ಬಿಲ್ವಪತ್ರೆ ಮರವಿತ್ತು. ಈಗಲೂ ಈ ಸ್ಥಳದಲ್ಲಿ ಪ್ರಕೃತಿ ಸಹಜವಾಗಿ ಅನೇಕ ಬಿಲ್ವಪತ್ರೆ ಗಿಡ ಬೆಳೆಯುತ್ತಿವೆ. ಬಿಲ್ವಪತ್ರೆ ಇರುವ ಜಾಗವೇ ಶಿವನಿಗೆ ಸರ್ವಶ್ರೇಷ್ಠ ಎನ್ನುವ ನಂಬಿಕೆಯಿದೆ. ಅದರಂತೆ ಈ ಕ್ಷೇತ್ರ ಅತ್ಯಂತ ಪವಿತ್ರ ಕ್ಷೇತ್ರ ಎನ್ನುವುದು ಇಲ್ಲಿಯ ಸ್ಥಳೀಯರ ನಂಬಿಕೆ. ನಾಗಣ್ಣ, ಉಪಾಧ್ಯಕ್ಷರು, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ, ಮಾದಪಟ್ಟಣ.

**
ಕೊಡಗರಹಳ್ಳಿ ನಿವಾಸಿಯೊಬ್ಬರಿಗೆ ಯಾವುದೇ ವ್ಯವಹಾರ ಕೈಹಿಡಿಯುತ್ತಿರಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಸಿಗುತ್ತಿರಲಿಲ್ಲ. ನಮ್ಮ ಸಲಹೆ ಮೇರೆಗೆ ಇಲ್ಲಿಗೆ ಬಂದು ಬೇಡಿಕೊಂಡರು. ಕೆಲವೇ ದಿನಗಳಲ್ಲಿ ಅವರ ವ್ಯವಹಾರದಲ್ಲಿ ಬಾರಿ ಬದಲಾವಣೆ ಸಾಧ್ಯವಾಗಿದೆ. ಈಗ ಅವರು ಇಲ್ಲಿಗೆ ಬಂದು ಪೂಜೆ ಮಾಡಿಸುವುದು ಸಾಮಾನ್ಯವಾಗಿಬಿಟ್ಟಿದೆ. ವಿನೋದ್, ಖಜಾಂಚಿ, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ,
ಮಾದಪಟ್ಟಣ.

**
ಮಾದಪಟ್ಟಣ ಮೂಲ ನಿವಾಸಿ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಒಬ್ಬರ ಪುಟ್ಟ ಮಗನಿಗೆ ತೀವ್ರ ಅನಾರೋಗ್ಯ ಕಾಡುತ್ತಿತ್ತು. ಸಾಕಷ್ಟು ಆಸ್ಪತ್ರೆ ಅಲೆದಾಡಿದ್ದರು ಆರೋಗ್ಯ ಸರಿಯಿರಲಿಲ್ಲ. ನಂತರ ಇಲ್ಲಿಗೆ ಬಂದು ಸಂಕಲ್ಪ ಮಾಡಿಕೊಂಡ ನಂತರ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣಲಾಗುತ್ತಿದೆ. ನಿಧಾನವಾಗಿ ಜನರಿಗೆ ಇಲ್ಲಿಯ ಶಕ್ತಿ ತಿಳಿಯುತ್ತಿದೆ. ಖಂಡಿತ ಮುಂದೊಂದು ದಿನ ಈ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಭಕ್ತಾದಿಗಳ ನಂಬಿಕೆಗೆ ದೊರೆಯುತ್ತೆ ಎನ್ನುವ ವಿಶ್ವಾಸ ನಮ್ಮದು. ನಾಗೇಶ್, ಅಧ್ಯಕ್ಷರು, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ, ಮಾದಪಟ್ಟಣ.

**
ಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯಲ್ಲೇ ಪ್ರತಿದಿನ ರುದ್ರಾಭಿಷೇಕ ಮಾಡಲಾಗುತ್ತೆ. ಪ್ರತಿ ೧೫ ದಿನಕ್ಕೆ ಒಮ್ಮೆ ಪ್ರದೋಷ ಪೂಜೆ ನಡೆಯುತ್ತೆ. ಈ ಕ್ಷೇತ್ರ ಎಷ್ಟು ಪವಿತ್ರ ಎನ್ನುವುದಕ್ಕೆ ನೂರಾರು ವರ್ಷ ಹಳೆಯದಾದ ವಿಷ್ಣು ಸಾನಿಧ್ಯವಿದೆ. ಭಕ್ತಾದಿಗಳ ನಂಬಿಕೆಗೆ ಧಕ್ಕೆಯಾಗದ ರೀತಿಯಲ್ಲಿ ಇಷ್ಟಾರ್ಥಗಳನ್ನು ಶಿವ ಕರುಣಿಸುತ್ತಿದ್ದಾನೆ. ಮುಂದೆಯೂ ಕರುಣಿಸುವ ವಿಶ್ವಾಸವಿದೆ. ವಿದ್ಯಾರ್ಥಿಗಳು ಬಂದು ಬೇಡಿಕೊಂಡರೇ ಖಂಡಿತ ಅವರ ಭವಿಷ್ಯ ಉಜ್ವಲವಾಗುತ್ತೆ. ಪರಮೇಶ್ವರ್ ಭಟ್, ಅರ್ಚಕ, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ, ಮಾದಪಟ್ಟಣ.

**
ಇಲ್ಲಿ ಶಿವನ ದೇವಸ್ಥಾನ ನಿರ್ಮಾಣ ಕಾರ್ಯ ಆರಂಭವಾದಗಿನಿಂದ ಪ್ರತಿನಿತ್ಯ ಇಲ್ಲಿಯ ಎಲ್ಲಾ ತರಹದ ಕೆಲಸಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಶಿವ ಸೇವೆಯಲ್ಲಿ ಸಂತೋಷ ಕಾಣುತ್ತಿದ್ದೇನೆ. ಮಂಜಣ್ಣ, ನಿರ್ದೇಶಕರು, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ,
ಮಾದಪಟ್ಟಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net