ಅನ್ಯ ಭಾಷೆಗಳ ವ್ಯಾಮೋಹಕ್ಕೆ ಕನ್ನಡ ಕಡೆಗಣನೆ

26Kush01
Published on

ಕುಶಾಲನಗರ: ಪರಭಾಷೆಗಳ ವ್ಯಾಮೋಹದಿಂದಾಗಿ ಕನ್ನಡ ಭಾಷೆಯು ಕಡೆಗಣನೆಯಾಗುತ್ತಿದೆ ಎಂದು ಕುಶಾಲನಗರ ತಾಲೂಕಿನ ಪೋಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ವಿಷಾದಿಸಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ, ಕನ್ನಡ ನೆಲದಲ್ಲಿ ಬದುಕುತ್ತಿರುವ ಜನರ ಮೊದಲ ಅಸ್ಮಿತೆಯಾಗಬೇಕು. ಇತರೆ ಭಾಷೆಗಳ ಬಳಕೆ ಅಗತ್ಯಕ್ಕೆ ಮಾತ್ರ ಇರಬೇಕು. ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವ ಮೂಲಕ ಕನ್ನಡ ಭಾಷೆ, ನೆಲ - ಜಲದ ಬಗ್ಗೆ ಅಭಿಮಾನ ಹೊಂದಬೇಕು ಎಂದು ಗಂಗಾಧರಪ್ಪ ಹೇಳಿದರು.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಪ್ರಜ್ಞೆ ಬೆಳೆಯಲು ವಿದ್ಯಾರ್ಥಿಗಳು ನಿತ್ಯವೂ ತಮಗೆ ತೋಚಿದ್ದನ್ನು ಬರೆಯಲು ಕಲಿಯಬೇಕು. ಕಥೆ, ಕವಿತೆ, ಕವನ ಸಂಕಲನ ಓದುವ ಮೂಲಕ ಕನ್ನಡ ಭಾಷಾ ಬಾಂಧವ್ಯ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆಗೊಳಿಸುವ ಅನಿವಾರ್ಯತೆ ಇಂದು ತುರ್ತು ಅಗತ್ಯವಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕಾಲೇಜುಗಳ ಕೆಲವು ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಮಾಹಿತಿಗಳಿದ್ದು ಅಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅದಕ್ಕೂ ಮುನ್ನಾ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸ ಲಾಗುತ್ತದೆ ಎಂದು ಗಂಗಾಧರಪ್ಪ ಹೇಳಿದರು.

ಮುಖ್ಯಅತಿಥಿಯಾಗಿದ್ದ ಕುಶಾಲನಗರದ ಸಾಹಿತಿ ಬಿ.ಆರ್. ನಾರಾಯಣ ಮಾತನಾಡಿ, ಕನ್ನಡ ಭಾಷೆ ಬಗೆಗಿನ ಪ್ರೀತಿ ಹಾಗು ಕಾಳಜಿ ಎಷ್ಟೇ ಇದ್ದರೂ ಅದರ ಬಗೆಗಿನ ಬದ್ಧತೆ ಮತ್ತು ಬಾಧ್ಯತೆಗಳು ಪ್ರಕಟವಾಗಲು ಸದಸ್ಯತ್ವ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರಲ್ಲದೇ, ಕನ್ನಡದ ಸೌಂದರ್ಯ ಮಹತ್ತು ಬೃಹತ್ತುಗಳು ಇತರ ಭಾಷೆಗಳೊಂದಿಗೆ ಹೋಲಿಸಿದರೆ ಹಿರಿದು. ಇದನ್ನರಿತು ಉಳಿಸಿ ಬೆಳೆಸುವ ಕಾರ್ಯ ವಿದ್ಯಾರ್ಥಿ ಗಳಿಂದಾಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ವತಿಯಿಂದ ಹೊರತಂದಿರುವ ಆ್ಯಪ್ ಮೂಲಕ ೧೫೦ ರೂಗೆ ಸ್ಮಾರ್ಟ್ ಕಾರ್ಡು ಹಾಗು ೨೫೦ ರೂ ಗಳ ಸದಸ್ಯತ್ವವನ್ನು ಪ್ರತಿಯೊಬ್ಬರು ಪಡೆದುಕೊಳ್ಳ ಬಹುದಾಗಿದೆ. ಮಾಜಿ ಯೋಧರು ಹಾಗೂ ವಿಕಲಚೇತನರಿಗೆ ಉಚಿತ ಸದಸ್ಯತ್ವ ನೀಡಲಾಗುತ್ತಿದೆ. ಕುಶಾಲನಗರ ತಾಲೂಕಿನಲ್ಲಿ ಕನಿಷ್ಠ ೧೦ ಸಾವಿರ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.

ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರುದ್ರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪುರುಷೋತ್ತಮ, ಕನ್ನಡ ಪ್ರಾಧ್ಯಾಪಕ ಡಾ.ನಾಗೇಂದ್ರ ಸ್ವಾಮಿ, ಕಾಲೇಜಿನ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಮಂಜುನಾಥ, ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಎಸ್.ನಾಗರಾಜು, ಖಜಾಂಚಿ ಕೆ.ವಿ. ಉಮೇಶ್, ತಾಲೂಕು ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಹೆಬ್ಬಾಲೆ ಹೋಬಳಿ ಘಟಕ ಅಧ್ಯಕ್ಷ ಎಂ.ಎನ್. ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net