ಕೊಡಗಿನ ಸಮಸ್ಯೆ ಪರಿಹಾರಕ್ಕೆ ಜೆಡಿ(ಎಸ್) ಶಾಸಕ ಅತ್ಯಗತ್ಯ

24mdkn7 - Copy
Published on

ವಿಜಯವಾಣಿ ಸುದ್ದಿಜಾಲ ಕುಶಾಲನಗರ


ಕೊಡಗಿನ ಸಮಸ್ಯೆ ಪರಿಹಾರಕ್ಕೆ ಪ್ರಾದೇಶಿಕ ಪಕ್ಷ ಜೆಡಿ(ಎಸ್) ಅಭ್ಯರ್ಥಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಮಡಿಕೇರಿ ಕ್ಷೇತ್ರ ಜೆಡಿ(ಎಸ್) ಸಂಭವನೀಯ ಅಭ್ಯರ್ಥಿ ನಾಪಂಡ ಮುತ್ತಪ್ಪ ಹೇಳಿದರು.

ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಜೆಡಿಎಸ್ ಯುವ ಘಟಕ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕೊಡಗಿನಲ್ಲಿ ಉದ್ಯೋಗಾವಕಾಶ ಇಲ್ಲದೇ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಪರಿಹರಿ ಸಲು ಕೃಷಿ ಅಥವಾ ಉತ್ಪಾದನಾ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಟಿಸಬೇಕೆಂದರು.

ಹಣ, ಹೆಂಡ ಕೊಟ್ಟು ಯುವಜನರನ್ನು ಜೆಡಿ(ಎಸ್)ಗೆ ಸೇರ್ಪಡೆ ಮಾಡುವುದಿಲ್ಲ. ಯುವಜನ ಅನುಭವಿಸುತ್ತಿರುವ ಸಂಕಷ್ಟ ಪರಿಹಾರಕ್ಕಾಗಿ ಜೆಡಿ(ಎಸ್)ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯುವಜನರ ಸಮಸ್ಯೆ ಪರಿಹಾರಕ್ಕೆ ಪರಿಹಾರ ಸೂತ್ರ ಜಾರಿಗೆ ತರಲಾಗುವುದೆಂದರು.

ಕೊಡಗಿನ ರಸ್ತೆಗಳು ತೀರಾ ದುಸ್ಥಿತಿಗೆ ತಲುಪಿದೆ. ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದನ್ನು ಪ್ರತಿಯೊಬ್ಬರು ಪ್ರಶ್ನಿಸುವುದರ ಮೂಲಕ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮಾಡಬೇಕು. ಕೊಡಗಿಗೆ ಅಗತ್ಯವಾಗಿ ಬೇಕಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಗಟ್ಟಿಧ್ವನಿ ಮೊಳಗಿಸಬೇಕೆಂದರು.

ಕೊಡಗಿನವರಿಗೆ ಕೊಡಗಿನಲ್ಲಿಯೇ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಹೊರ ಭಾಗದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಕೊಡಗಿಗೆ ಬರು ವಂತೆ ಮಾಡಬೇಕು. ಕೊಡಗಿನಲ್ಲಿರುವ ಶಿಕ್ಷಣ ಸಂಸ್ಥೆಗಳನ್ನು ಸಧೃಡಗೊಳಿಸಬೇಕೆಂದು ನಾಪಂಡ ಮುತ್ತಪ್ಪ ಹೇಳಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ೨೦೨೩ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಎಂದು ಯುವ ಜೆಡಿ(ಎಸ್) ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ವಿಶ್ವಾಸ ವ್ಯಕ್ತ ಪಡಿಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ನಿಗಾ ವಹಿಸಸಲಾಗಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಎಚ್.ಆರ್. ಸುರೇಶ್ ಹೇಳಿದರು.

ಜೆಡಿ(ಎಸ್) ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಡಿ. ರವಿ, ಯುವ ಜೆಡಿ(ಎಸ್) ಜಿಲ್ಲಾ ಸಂಘಟನಾ ಕಾರ್ಯದರ್ಶಿ ತ್ರಿನೇಶ್, ತಾಲೂಕು ಸಂಘಟನಾ ಕಾರ್ಯದರ್ಶಿ ಲಿಂಗರಾಜ್, ಯುವ ಮುಖಂಡರಾದ ನವೀನ್, ಅಪ್ಪುಣು, ಆಶೀಫ್, ರವಿ ಮಾದಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net