

ಕೆ.ಎಸ್. ನಾಗೇಶ್ ಕುಶಾಲನಗರ
ಕುಶಾಲನಗರ- ಹಾಸನ ರಾಜ್ಯ ಹೆದ್ದಾರಿಯಲ್ಲಿ ಬರುವ ಹೆಬ್ಬಾಲೆ ಗ್ರಾಮದಲ್ಲಿ ಮನೆಗೊಬ್ಬ ರೈತ, ಮನೆಗೊಬ್ಬ ಶಿಕ್ಷಕ ಸಿಗುತ್ತಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರ. ಸುತ್ತಮುತ್ತಲಿನ ಹಳ್ಳಿಗಳ ರೈತರ ಪಾಲಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಸ್. ಅಶೋಕ್ ತಮ್ಮ ಹುಟ್ಟೂರಿನ ಪ್ರೀತಿಯಿಂದ ಇಲ್ಲಿಗೆ ಗ್ರಂಥಾಲಯ, ಬಸ್ ನಿಲ್ದಾಣ, ಸುವರ್ಣ ಗ್ರಾಮ ಯೋಜನೆ, ಹೆಬ್ಬಾಲೆ- ಶಿರಂಗಾಲ ತನಕ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ.
ಸರ್ಕಾರಿ ಆಸ್ಪತ್ರೆ ಇದೆ. ಇರುವ ಒಬ್ಬ ವೈದ್ಯ ಒಪಿಡಿಯಲ್ಲಿ ದಿನಕ್ಕೆ ೧೮೦ ರಿಂದ ೨೦೦ ಜನರ ಪರೀಕ್ಷೆ ಮಾಡಬೇಕಿದೆ. ಅಲ್ಲಿ ೩ ಸ್ಟಾಫ್ ನರ್ಸ್ ಇರಬೇಕಾಗಿದೆ. ಆದರೆ, ಒಬ್ಬರಿದ್ದಾರೆ. ೩ ಜನ ತರಬೇತಿ ಹೊಂದಿದ ಡಿ ಗ್ರೂಪ್ ನೌಕರರು ಇರಬೇಕಿತ್ತು. ಆದರೆ, ದಿನಗೂಲಿ ಆಧಾರದ ಮೇಲೆ ಡಿ ಗ್ರೂಪ್ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.
ಆಸ್ಪತ್ರೆ ಕಟ್ಟಡ ಮತ್ತು ವಸತಿ ನಿಲಯ ಮಳೆ ಬಂದರೆ ಸೋರುತ್ತಿದೆ. ೬.೫ ಎಕರೆ ಜಾಗ ಸ್ವಚ್ಛಗೊಳಿಸಲು ಅನುದಾನ ಕೊರತೆಯಿದೆ. ರಕ್ಷಣೆಗಾಗಿ ಮತ್ತು ಜಾಗದ ನಿರ್ವಹಣೆಗಾಗಿ ತಡೆಗೋಡೆ ನಿರ್ಮಿಸಲು ಇಲಾಖೆಗೆ ಹಲವು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿ ಡಾ.ಭರತ್.
ಇಲ್ಲಿಯ ವಿದ್ಯಾರ್ಥಿಗಳು ಕಾಲೇಜು ವಿದ್ಯಾಭ್ಯಾಸಕ್ಕಾಗಿ ೧೩ ಕಿಮೀ ದೂರ ಪ್ರಯಾಣ ಮಾಡಬೇಕು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಯಿಂದ ಸರ್ಕಾರದ ಮಟ್ಟಕ್ಕೆ ಕಾಲೇಜು ಮಂಜೂರಾತಿಗಾಗಿ ಪೈಲ್ ಹೋಗಿ ೧೦ ವರ್ಷಗಳು ಕಳೆದರು ಕಾಲೇಜು ಮಂಜೂರಾತಿ ಆಗಿಲ್ಲ ಎನ್ನುವ ಬೇಸರವನ್ನು ಸ್ಥಳೀಯರಾದ ಉಮೇಶ್ ವ್ಯಕ್ತ ಪಡಿಸುತ್ತಾರೆ.
ರೈತರು ಹೆಚ್ಚಿರುವ ಈ ಗ್ರಾಮದಲ್ಲಿ ಜಾನುವಾರುಗಳು ಅಧಿಕ ಇವೆ.. ಪಶು ವೈದ್ಯರ ಅವಶ್ಯಕತೆ ಇದೆ ಎನ್ನುವುದನ್ನು ಸಂಬಂಧಿಸಿದವರಿಗೆ ಎಷ್ಟೇ ಮನವರಿಕೆ ಮಾಡಿಕೊಟ್ಟರು ಪ್ರಯೋಜನವಾಗಿಲ್ಲ. ಪಶು ಇಲಾಖೆಗೆ ಸೇರಿದ ಆಸ್ಪತ್ರೆ ಕಟ್ಟಡವಿದ್ದರು ಅದರ ಪ್ರಯೋಜನ ಮಾತ್ರ ಯಾರಿಗೂ ಸಿಗದಿರುವ ಬಗ್ಗೆ ರೈತರು ಆಕ್ರೋಶ ವ್ಯಕ್ತ ಪಡಿಸುತ್ತಾರೆ.
ಗ್ರಾಮ ಲೆಕ್ಕಿಗರು ಕನಿಷ್ಠ ವಾರಕ್ಕೊಮ್ಮೆ ಆದರೂ ಇಲ್ಲಿಯ ಜನರಿಗೆ ಸಿಗಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲಿಯವರಿಗೆ ತಿಳಿಸಿ ಅದರ ಲಾಭ ಸಿಗುವಂತೆ ನೋಡಿಕೊಳ್ಳಬೇಕು. ಅದರ ಜೊತೆಗೆ ರೈತರ ಕಂದಾಯ ವಸೂಲಾತಿಯು ಸುಲಭವಾಗುತ್ತೆ. ಡಿಜಿಟಲ್ ಗ್ರಂಥಾಲಯ ಆರಂಭವಾಗಿ ವರ್ಷ ಕಳೆದರೂ ಗ್ರಾಮಸ್ಥರಿಗೆ ಪ್ರಯೋಜನವಾಗುತ್ತಿಲ್ಲ. ನಿವೃತ್ತಿಯಾದ ಹಿರಿಯರು ಮತ್ತು ಯುವಜನತೆಗೆ ಇದರಿಂದ ತುಂಬಾ ಅನುಕೂಲವಾಗುವಂತೆ ಎಲ್ಲಾ ಸೌಲಭ್ಯಗಳು ದೊರೆಯಬೇಕೆಂದು ನಿವೃತ್ತ ಶಿಕ್ಷಕ ಪುಟ್ಟರಾಜು ಹೇಳುತ್ತಾರೆ.
**
ಬ್ರಿಟಿಷ್ ಆಳ್ವಿಕೆ ಕಾಲದ ಐಬಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದು, ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಅದರ ದುರಸ್ಥಿಯಾಗಬೇಕು. ಸುತ್ತಮುತ್ತಲಿನ ಗ್ರಾಮಸ್ಥರ ಅನುಮಾನಾಸ್ಪದ ಸಾವಿಗೀಡಾದ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಗೆ ಬೇಕಾದ ಸಕಲವು ಇದೆ. ನುರಿತ ಕೆಲಸಗಾರರು ಇಲ್ಲದಿರುವುದರಿಂದ ಕುಶಾಲನಗರಕ್ಕೆ ಹೋಗುವುದು ಆರ್ಥಿಕ ಹೊಡೆತ ಬೀಳುತ್ತಿದೆ. ಉಮೇಶ್, ಖಜಾಂಚಿ, ಕಸಾಪ, ಕುಶಾಲನಗರ ತಾಲೂಕು.
**
ಆರ್ಥಿಕವಾಗಿ ಬಹಳ ಹಿಂದಿರುವ ಇಲ್ಲಿಯ ರೈತರ ಮಕ್ಕಳಿಗಾಗಿ ಇಲ್ಲಿ ಕಾಲೇಜು ಆರಂಭವಾಗಬೇಕು. ಬಹಳ ಹಿಂದೆಯೇ ಯೂನಿವರ್ಸಿಟಿಯ ಸಿಂಡಿಕೇಟ್ ಕಮಿಟಿ ಸರ್ವೇ ನಡೆಸಿದೆ. ಜನಪ್ರತಿನಿಧಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಸಾಧ್ಯವಾಗಿಲ್ಲ. ಒಣಪ್ರತಿಷ್ಠೆ ಬಿಟ್ಟು ಇಲ್ಲಿಯ ಬಹು ವರ್ಷಗಳ ಬೇಡಿಕೆಯನ್ನು ಈಗಲಾದರೂ ಈಡೇರಿಸಬೇಕು. ಎಚ್.ತಿಮ್ಮೇಗೌಡ, ನಿವೃತ್ತ ಶಿಕ್ಷಕ, ಹೆಬ್ಬಾಲೆ.
**
ಪಶು ವೈದ್ಯಾಧಿಕಾರಿ ಒಬ್ಬರನ್ನು ಕರೆಸಲು ಸಾಧ್ಯವಾಗಿಲ್ಲ. ನೂರಾರು ಸಂಖ್ಯೆಯ ಜಾನುವಾರಗಳ ರಕ್ಷಣೆಗಾಗಿ ಖಾಸಗಿ ವೈದ್ಯರನ್ನು ಅವಲಂಬಿಸಿದ್ದೇವೆ. ಪಶು ಅಸ್ಪತ್ರೆಯಿದೆ. ವೈದ್ಯರಿಲ್ಲ. ಸಂಬಂಧಿಸಿದವರು ಕೂಡಲೇ ಸೂಕ್ತ ಕ್ರಮ ವಹಿಸಬೇಕು. ಜಿ.ಎಲ್. ರಾಮಪ್ಪ, ರೈತ, ಹೆಬ್ಬಾಲೆ.
**
ಗ್ರಂಥಾಲಯ ಹೆಸರಿಗಷ್ಟೇ ಇದೆ. ಲೈಬ್ರೆಯನ್ ಮಂಜೇಗೌಡ ಬಹುತೇಕ ಸಂದರ್ಭ ಬಾಗಿಲು ಮುಚ್ಚಿರುತ್ತಾರೆ. ಕೇಳಿದರೆ ದರ್ಪದ ಮಾತುಗಳು. ದಿನಪತ್ರಿಕೆಗಳು ಇರುವುದಿಲ್ಲ. ನಿವೃತ್ತಿಯಾದ ನಂತರ ನಮ್ಮಂತಹ ಹಿರಿಯರಿಗೆ ಇದರ ಉಪಯೋಗ ದೊರೆಯುತ್ತಿಲ್ಲ. ಎಚ್.ಎಲ್. ಪುಟ್ಟರಾಜು, ನಿವೃತ್ತ ಶಿಕ್ಷಕ, ಹೆಬ್ಬಾಲೆ.
**
ನಿಗದಿ ಪಡಿಸಿರುವ ಅವಧಿಯಲ್ಲಿ ನಾನು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಗ್ರಾಪಂ ಕಚೇರಿ ಪಕ್ಕದಲ್ಲೇ ಇರುವುದರಿಂದ ಗ್ರಾಮಸ್ಥರು ತುಂಬಾ ಜನ ಬಂದು ಇಲ್ಲಿ ಸಿಗುವ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಡಿಜಿಟಲ್ ಎನ್ನುವುದಕ್ಕೆ ಒಂದು ಕಂಪ್ಯೂಟರ್ ಯಂತ್ರ ನೀಡಿದ್ದಾರೆ. ಅದಕ್ಕೆ ಪೂರಕವಾದ ತರಬೇತಿ ನಮಗೆ ನೀಡಿರುವುದರಿಂದ ಗೊತ್ತಿರುವ ಯುವಜನಾಂಗ ಕಂಪ್ಯೂಟರ್ ಪ್ರಯೋಜನ ಪಡೆಯುತ್ತಿದ್ದಾರೆ. ಮಂಜೇಗೌಡ, ಲೈಬ್ರೆಯನ್, ಹೆಬ್ಬಾಲೆ.
**
ಆಸ್ಪತ್ರೆ ಕಟ್ಟಡ ದುರಸ್ಥಿ ಮಾಡಬೇಕು. ಪಂಚಾಯಿತಿ ಸಹಕಾರದಲ್ಲಿ ೩ ತಿಂಗಳಿಗೊಮ್ಮೆ ಆವರಣ ಸ್ವಚ್ಛಗೊಳಿಸಲಾಗುತ್ತಿದೆ. ಸಿಬ್ಬಂದಿ ವಸತಿ ನಿಲಯ, ವಾಸಿಸಲು ಸಾಧ್ಯವಾಗದಷ್ಟು ಶಿಥಿಲಾವಸ್ಥೆಗೆ ತಲುಪಿದೆ. ೬.೫ ಎಕರೆ ಇಲಾಖೆಯ ಜಾಗದ ರಕ್ಷಣೆಗೆ ತಡೆಗೋಡೆ ನಿರ್ಮಿಸುವುದು ಒಳ್ಳೆಯದು. ಅಗತ್ಯ ಸಿಬ್ಬಂದಿ ನೇಮಿಸಿದರೆ ಗ್ರಾಮಸ್ಥರ ಇಚ್ಛೆಯಂತೆ ಕೆಲಸ ಮಾಡಬಹುದು. ಡಾ.ಭರತ್, ಹೆಬ್ಬಾಲೆ ಆಸ್ಪತ್ರೆ ವೈದ್ಯಾಧಿಕಾರಿ.
**
ಊರಿನಿಂದ ಹೊರಗೆ ಇದೆ ಎನ್ನುವ ಮನಸ್ಸು ಈ ಆಸ್ಪತ್ರೆಗೆ ಬಂದರೆ ಬರುತ್ತದೆ. ಆವರಣದಲ್ಲಿ ಬೆಳೆದಿರುವ ಗಿಡಗಂಟೆ ಸ್ವಚ್ಛಗೊಳಿಸಬೇಕು. ಆಸ್ಪತ್ರೆಯಲ್ಲಿ ಇರುವ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಇಲ್ಲಿಗೆ ಇನ್ನು ಕನಿಷ್ಠ ಇಬ್ಬರು ವೈದ್ಯರು, ನರ್ಸ್‌ಗಳ ಅವಶ್ಯಕತೆ ಇದೆ. ಕೆ.ಯು. ರಫೀಕ್, ಹಕ್ಕೆ ನಿವಾಸಿ.