

ಮಡಿಕೇರಿ: ಸಹಕಾರ ಸಂಘಗಳು ಸಮಾಜಮುಖಿ ಕಾರ್ಯಕ್ರಮ ಮಾಡಬೇಕೆಂದು ಸಹಕಾರ ಭಾರತಿ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಬೀನಾ ಬೊಳ್ಳಮ್ಮ ಕರೆ ನೀಡಿದರು.
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಕಾರ್ಯದರ್ಶಿಗಳಿಗೆ ಸೋಮವಾರ ಆಯೋಜಿಸಿದ್ದ ಸಹಕಾರ ಕಾಯ್ದೆ-ಕಾನೂನು, ಸರ್ಕಾರದಿಂದ ದೊರಕುವ ಸವಲತ್ತು ಹಾಗೂ ಮಹಿಳಾ ಆರೋಗ್ಯದ ಕುರಿತು ಶೇಷ ಶಿಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂಘದ ಸದಸ್ಯರು ಪರಸ್ಪರ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಣ್ಣ ಉದ್ಯಮಗಳನ್ನು ಸಂಘಗಳ ಮೂಲಕ ನಡೆಸಿಕೊಂಡು ಬರಬೇಕು. ಸ್ಥಳೀಯ ಉತ್ಪನ್ನಗಳನ್ನು ಸಂಘಗಳ ಮೂಲಕ ಉತ್ಪಾದಿಸಿ, ಮಾರುಕಟ್ಟೆ ಸೌಲಭ್ಯ ಒದಗಿಸಿದ್ದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದರು.
ಹಿರಿಯ ಮಹಿಳಾ ಸಹಕಾರಿ ಲೀಲಾ ಮೇದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಹಕಾರ ಸಂಘಗಳ ಮೂಲಕ ಆದಾಯೋತ್ಪನ್ನ ಚಟುವಟಿಕೆ ಕೈಗೊಂಡಲ್ಲಿ ಮಹಿಳೆಯರ ಆರ್ಥಿಕ ಪ್ರಗತಿ ಸಾಧ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ, ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿ ಸಲು ಇಂತಹ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಎಸ್.ಆರ್. ಕೇಶಿನಿ, ಕೆಐಸಿಎಂ ನಿವೃತ್ತ ಪ್ರಾಂಶುಪಾಲರಾದ ಎಂ.ಎಂ. ಶ್ಯಾಮಲಾ, ಸೋಮವಾರಪೇಟೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ. ಶಾಂತಿ ಮಾತನಾಡಿದರು. ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ರವಿ ಬಸಪ್ಪ, ಎನ್.ಎಂ. ಉಮೇಶ್ ಉತ್ತಪ್ಪ, ಪಿ.ಬಿ. ಯತೀಶ್ ಮತ್ತಿತರರು ಇದ್ದರು.