

ಕುಶಾಲನಗರ : ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಪಡುವುದರ ಜತೆಗೆ ಇತರ ಭಾಷೆಗಳನ್ನೂ ಗೌರವಿಸಬೇಕು ಎಂದು ಸುಳ್ಯದ ಡಾ. ಅನುರಾಧ ಕುರುಂಜಿ ಹೇಳಿದರು.
ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಗುರುವಾರ ಸಿರಿ ಸಂಭ್ರಮ ಕವಿಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೃಜನಶೀಲ, ಚಿಂತನಾಶೀಲ ಸಾಹಿತ್ಯಗಳು ಜನರ ಮನಸ್ಸಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತವೆ. ಸಮಾಜಮುಖಿ ವಿಚಾರಗಳು, ಸಮಾಜಕ್ಕೆ ಕೊಡುಗೆ ನೀಡುವಂತಹ ಸಾಹಿತ್ಯದ ಅಗತ್ಯವಿದೆ. ಹಿರಿಯ ಕವಿಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಹಿತ್ಯವನ್ನು ಬಳಸಿಕೊಂಡು ಇಂದಿಗೂ ಚಿರಸ್ಥಾಯಿಯಾಗಿದ್ದಾರೆ ಎಂದರು.
ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ಶರ್ಮಿಳಾ ರಮೇಶ್ ರಚನೆಯ ಬಾಗಿಲು ಮುಚ್ಚಿವೆ ಕವನಗಳು ಹಾಗೂ ಮೌನ ಮಾತಾದಾಗ ಕೃತಿಯನ್ನು ಶಿಕ್ಷಕ ಉ.ರಾ.ನಾಗೇಶ್ ಬಿಡುಗಡೆ ಮಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕುಡೆಕಲ್ ಸಂತೋಷ್ ವಹಿಸಿದ್ದರು. ಕರ್ನಾಟಕ ಲೇಖಕಿಯರ ಬಳಗದ ಕೊಡಗು ಘಟಕದ ಅಧ್ಯಕ್ಷೆ ವಿಜಯ ವಿಷ್ಣುಭಟ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಸಾಹಿತಿ ಫ್ಯಾನ್ಸಿ ಮುತ್ತಣ್ಣ, ವೈಲೇಶ್, ಎಂ.ಡಿ.ರಂಗಸ್ವಾಮಿ, ಉಳುವಂಗಡ ಕಾವೇರಿ, ಕವಿ ನಲ್ವಿಜಯ ಇತರರು ಇದ್ದರು.