ಕುಶಾಲನಗರ : ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿರುವುದರ ಹಿಂದೆ ಕವಿ, ಸಾಹಿತಿಗಳ ಕೊಡುಗೆ ಅನನ್ಯವಾಗಿದೆ ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಕನ್ನಡ ಶಿಕ್ಷಕ ಮೆ.ನಾ.ವೆಂಕಟ್ ನಾಯಕ್ ತಿಳಿಸಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾರತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ (ಬೆಂಗಳೂರಿನ ಎಂ.ಜಿ.ನಾಗರಾಜ್ ಮತ್ತು ಸುಲೋಚನಾ ದಂಪತಿ ದತ್ತಿನಿಧಿ) ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಕನ್ನಡದ ಮೊದಲ ಕವಿ ಪಂಪನಿಂದ ಹಿಡಿದು ಇಂದಿನವರೆಗೆ ಸಾವಿರಾರು ಜನ ಕವಿಗಳು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕಾಣಿಕೆ ನೀಡಿದ್ದಾರೆ. ಕವಿಗಳಾದ ಪಂಪ, ಪೊನ್ನ, ರನ್ನ, ಷಡಕ್ಷರಿ ದೇವ ನಾಗಚಂದ್ರ, ನಾಗವರ್ಮ, ಕುಮಾರವ್ಯಾಸರರಿಂದ ಕನ್ನಡ ಮಹೋನ್ನತ ಸ್ಥಾನ ಪಡೆದುಕೊಂಡಿತು ಎಂದರು.