

ಶುಭ ಹಾರೈಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್
ಕುಶಾಲನಗರ : ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಎರಡನೇ ಅವಧಿಯ ಅಧ್ಯಕ್ಷರಾಗಿ ಜಯಲಕ್ಷ್ಮೀ ಚಂದ್ರು ಮತ್ತು ಉಪಾಧ್ಯಕ್ಷೆಯಾಗಿ ಪುಟ್ಟಲಕ್ಷ್ಮೀ ಸೋಮವಾರ ಅಧಿಕಾರ ಸ್ವೀಕರಿಸಿದರು. ಪಪಂ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೂಗುಚ್ಛ ನೀಡುವ ಮೂಲಕ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ಶುಭ ಹಾರೈಸಿದರು.
ಈ ಸಂದರ್ಭ ಮಾತನಾಡಿದ ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ, ಅನೇಕ ಸವಾಲುಗಳ ನಡುವೆಯೇ ಪಟ್ಟಣದ ಪಂಚಾಯಿತಿ ಗದ್ದುಗೆ ಹಿಡಿಯುವಲ್ಲಿ ಕಾಂಗ್ರೆಸ್ ಯಶವಾಗಿದೆ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಪಕ್ಷದ ಗೌರವ ಹೆಚ್ಚಿಸಿ ಎಂದರು.
ಮಧ್ಯವರ್ತಿಗಳಿಗೆ ಆಸ್ಪದ ಸಲ್ಲದು: ಯಾವುದೇ ನಾಗರಿಕರನ್ನೂ ಸತಾಯಿಸದೇ ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಹೊಣೆಗಾರಿಕೆ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಮೇಲಿದೆ ಎಂಬುದನ್ನು ಮರೆಯಬಾರದು. ಪಂಚಾಯಿತಿಗೆ ಹೊಸದಾಗಿ ಸೇರಿರುವ ಮುಳ್ಳುಸೋಗೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಚುನಾಯಿತ ಆಡಳಿತ ಮಂಡಳಿ ಹೊಸ ಯೋಜನೆಗಳನ್ನು ರೂಪಿಸಬೇಕು. ಪಂಚಾಯಿತಿ ಕಚೇರಿಯೊಳಗೆ ಮುಖ್ಯಾಧಿಕಾರಿಗಳು ಮಧ್ಯವರ್ತಿಗಳಿಗೆ ಆಸ್ಪದ ಮಾಡಿಕೊಡಬಾರದು. ಚುನಾಯಿತ ಸದಸ್ಯರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ವಿ.ಪಿ. ಶಶಿಧರ ಸಲಹೆ ನೀಡಿದರು.