

ಮಡಿಕೇರಿ:
ಕುಶಾಲನಗರ ತಾಲೂಕಿನ ದುಬಾರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ತಂಟೆಕೋರ ಕುಶ ಮತ್ತೆ ಸದ್ದುಮಾಡುತ್ತಿದ್ದಾನೆ. ರೇಡಿಯೋ ಕಾಲರ್ ಹಾಕಿ ದೂರದ ಕಾಡಿಗೆ ಬಿಟ್ಟು ಬಂದರೂ ವರ್ಷದ ಹಿಂದೆ ಮರಳಿ ತವರಿಗೆ ಬಂದು ಸುತ್ತಮುತ್ತಲಿನ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದಾನೆ. ಜತೆಗೊಬ್ಬ ಕಿಲಾಡಿ ಗೆಳೆಯನೂ ಸೇರಿಕೊಂಡಿದ್ದು, ಸ್ಥಳೀಯರು ನಿದ್ದೆಗೆಡುವಂತೆ ಮಾಡಿದ್ದಾನೆ. ಆದರೆ ಇದು ಕುಶನ ಕೆಲಸವಲ್ಲ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ವಾದ.
ಮಿನುಕೊಲ್ಲಿ ಅರಣ್ಯಕ್ಕೆ ಸೇರಿದ ಕುಶ ಆನೆ ಮೊದಲಿನಿಂದಲೂ ದೊಡ್ಡ ತುಂಟ. ಕೃಷಿಕರಿಗೆ ಈತ ಕೊಡುತ್ತಿದದ್ದ ಉಪಟಳ ತಡೆಯಲಾರದೆ ೨೦೧೮ರಲ್ಲಿ ಚೆಟ್ಟಳ್ಳಿ ಸಮೀಪ ಕಂಡಕೆರೆಯಲ್ಲಿ ಸೆರೆಹಿಡಿಯಲಾಯಿತು. ನಂತರ ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ಕುಶ ಎನ್ನುವ ಹೆಸರು ಇಡಲಾಗಿತ್ತು. ಈ ಆನೆ ಜತೆಯೇ ಹಿಡಿಯಲಾಗಿದ್ದ ಮತ್ತೊಂದು ಆನೆಗೆ ಲವ ಎಂದು ನಾಮಕರಣ ಮಾಡಲಾಗಿತ್ತು. ದುಬಾರೆ ಸಾಕಾನೆ ಶಿಬಿರದ ಆನೆಗಳನ್ನು ಮೇವಿಗಾಗಿ ಕಾಡಿಗಟ್ಟುವುದು ಸಾಮಾನ್ಯ. ಹೀಗೆ ಅರಣ್ಯದೊಳಗೆ ಹೋಗುತ್ತಿದ್ದ ಶಿಬಿರದ ಕುಶನಿಗೆ ಕಾಡಿನ ಹೆಣ್ಣಾನೆಗಳ ಜೊತೆ ಗೆಳೆತನವಾಗಿತ್ತು. ಗೆಳೆತನ ಪ್ರೀತಿಗೆ ತಿರುಗಿ ಪ್ರಣಯದ ಹಂತಕ್ಕೆ ಬಂದಾಗ ೨೦೧೯ರ ನವೆಂಬರ್‌ನ ಒಂದು ದಿನ ಶಿಬಿರದಿಂದ ತಪ್ಪಿಸಿಕೊಂಡುಬಿಟ್ಟಿದ್ದ.
ಕಾಡಿನೊಳಗೆ ಸಂಗಾತಿಗಳ ಜತೆ ಸೇರಿಕೊಂಡ ನಂತರ ಶಿಬಿರದ ಪಾಠಗಳನ್ನೆಲ್ಲಾ ಬಹುತೇಕ ಮರೆತು ಮತ್ತೆ ಕಾಡಾನೆಯಂತೆಯೇ ಆಗಿಹೋದ. ಆಗಾಗ್ಗೆ ಮಾವುತರ ಕಣ್ಣಿಗೆ ಬೀಳುತ್ತಿದ್ದರೂ ಅವರ ಅಂಕುಶಕ್ಕೆ ಮಾತ್ರ ಸಿಗುತ್ತಿರಲಿಲ್ಲ. ಹೇಗಾದರೂ ಮಾಡಿ ಆತನನ್ನು ಮತ್ತೆ ಸೆರೆಹಿಡಿದು ಶಿಬಿರಕ್ಕೆ ತರಬೇಕೆಂದು ನಿರ್ಧರಿಸಿದ ಅರಣ್ಯ ಇಲಾಖೆ ಹೊಸದಾಗಿ ಕಾರ್ಯಾಚರಣೆಯನ್ನೇ ನಡೆಸಿತ್ತು. ಕೊನೆಗೆ ೨೦೨೧ರ ಮಾರ್ಚ್‌ನಲ್ಲಿ ಸಂಗಾತಿಗಳ ಜೊತೆಗೆ ಮೀನುಕೊಲ್ಲಿ ಅರಣ್ಯದಲ್ಲಿ ಇರುವಾಗಲೇ ಸಾಕಾನೆಗಳ ಸಹಕಾರದಿಂದ ಕುಶನನ್ನು ಹಿಡಿದು ಕಟ್ಟಿ ಹಾಕಲಾಯಿತು.
ಸುಮಾರು ಒಂದು ವರ್ಷ ಕಾಡೊಳಗೆ ಇದ್ದ ಕಾರಣ ಕುಶ ಮತ್ತೆ ಸೆರೆ ಸಿಕ್ಕುವ ಸಂದರ್ಭದಲ್ಲಿ ಉಂಡಾಡಿ ಗುಂಡನಂತೆ ಆಗಿಬಿಟ್ಟಿದ್ದ. ಮಾವುತರ ಭಾಷೆ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಅವರ ಆಜ್ಞೆಗಳಿಗೆ ಸ್ಪಂದಿಸುತ್ತಿರಲಿಲ್ಲ. ವರ್ತನೆಯೂ ಒರಟಾಗಿತ್ತು. ಮತ್ತೆ ತರಬೇತಿ ಕೊಟ್ಟರೆ ಸರಿಯಾಗುತ್ತಾನೆ ಎಂದು ಮಾವುತರು, ಅಧಿಕಾರಿಗಳು ನಂಬಿದ್ದರು. ಹಾಗಾಗಿ ಪುನಃ ಕ್ರಾಲ್ (ಮರದ ದೊಡ್ಡ ಪಂಜರ)ಗೆ ಸೇರಿಸಲಾಗಿತ್ತು. ಈ ವಿಷಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಮನೇಕಾ ಗಾಂಧಿ ಸೇರಿ ವನ್ಯಜೀವಿ ಹಕ್ಕುಗಳ ಕಾರ್ಯಕರ್ತರು ಕುಶನ ಬೆಂಬಲಕ್ಕೆ ನಿಂತಿದ್ದರು. ಕ್ರಾಲ್ ಒಳಗೆ ಕುಶನಿಗೆ ಚಿತ್ರ ಹಿಂಸೆಯಾಗುತ್ತಿದೆ. ಆತನನ್ನು ಮರಳಿ ಕಾಡಿಗೆ ಬಿಡಬೇಕು ಎಂದು ಒತ್ತಡ ಹೇರಿದ್ದರು.
ಎಲ್ಲ ಕಡೆಯಿಂದ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ೨೦೨೧ರ ಜೂನ್‌ನಲ್ಲಿ ಬಂಡೀಪುರ ವ್ಯಾಪ್ತಿಯ ಕರ್ನಾಟಕ, ಕೇರಳ ಗಡಿಭಾಗದ ಮೂಲೆಹೊಳೆ ಎಂಬಲ್ಲಿ ರೇಡಿಯೋ ಕಾಲರ್ ಅಳವಡಿಸಿ ಕುಶನನ್ನು ಬಿಡಲಾಗಿತ್ತು. ಆದರೆ ಕೆಲವೇ ದಿವಸಗಳಲ್ಲಿ ಸುಮಾರು ೯೦ ಕಿಮೀ ದೂರ ಕ್ರಮಿಸಿ ದುಬಾರೆಗೆ ಮರಳಿದ್ದ. ರೇಡಿಯೋ ಕಾಲರ್ ಸಂಕೇತಗಳನ್ನು ಆಧರಿಸಿ ಕುಶನ ಚಲನವಲನದ ಮೇಲೆ ಅರಣ್ಯ ಇಲಾಖೆ ಕಣ್ಣಿಟ್ಟಿತ್ತು. ದುಬಾರೆ ಸಾಕಾನೆ ಶಿಬಿರದ ಸಮೀಪವೇ ಕುಶ ಅಡ್ಡಾಡುತ್ತಿದ್ದ, ಜತೆಯಲ್ಲಿ ಇತರ ನಾಲ್ಕು ಕಾಡಾನೆಗಳು ಇರುವುದು ಕೂಡ ಕಂಡುಬಂದಿತ್ತು.
ದುಬಾರೆ ಅರಣ್ಯದ ಕಾವೇರಿ ನದಿಯಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಇದ್ದ ಕಾರಣ ಕುಶ ಆನೆಗೆ ನದಿ ದಾಟಿ ತನ್ನ ಮೂಲ ಮೀನುಕೊಲ್ಲಿ ಅರಣ್ಯಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಕೆದಂಬಾಡಿ ರಘು ಎಂಬವರ ಮನೆ ಬಳಿ ರೈಲ್ವೆ ಬ್ಯಾರಿಕೇಡ್ ತುಂಡಾಗಿದ್ದು, ಈ ಭಾಗಕ್ಕಾಗಿ ಕುಶ ಮೀನುಕೊಲ್ಲಿ ಅರಣ್ಯ ಸೇರಿಕೊಂಡಿದ್ದಾನೆ ಎನ್ನುತ್ತಾರೆ ಸ್ಥಳೀಯರು. ಕುಶ ಮೀನುಕೊಲ್ಲಿ ಅರಣ್ಯದಲ್ಲಿ ಇರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳೂ ಖಚಿತಪಡಿಸಿದ್ದಾರೆ. ಆದರೆ ಸಮಸ್ಯೆ ಇದಲ್ಲ.
ಮೀನುಕೊಲ್ಲಿ ಅರಣ್ಯ ಮತ್ತು ದುಬಾರೆ ಮಧ್ಯೆ ಹಲವೆಡೆ ಸೋಲಾರ್ ಬೇಲಿ ಹಾಳಾಗಿದೆ. ಬೇಲಿ ಅಂಚಿನಲ್ಲಿ ನಿರ್ವಹಣೆ ಇಲ್ಲದೆ ಕುರುಚಲು ಕಾಡು ಕೂಡ ಬೆಳೆದು ನಿಂತಿದೆ. ಇದರಿಂದಾಗಿ ಆನೆಗಳು ಆಹಾರ ಅರಸುತ್ತ ಸುಲಭವಾಗಿ ದುಬಾರೆ ಭಾಗದ ತೋಟಗಳಿಗೆ ನುಗ್ಗಬಹುದಾಗಿದೆ. ಕುಶ ಆನೆ ಕೂಡ ಆಗಾಗ್ಗೆ ದುಬಾರೆ ವ್ಯಾಪ್ತಿಯ ತೋಟಗಳಿಗೆ ತನ್ನ ಜತೆ ಇನ್ನೊಂದು ಆನೆ ಜೊತೆ ದಾಳಿ ಮಾಡಿ ಸಾಕಷ್ಟು ನಷ್ಟ ಉಂಟು ಮಾಡುತ್ತಿದ್ದಾನೆ. ರೇಡಿಯೋ ಕಾಲರ್ ಇರುವುದರಿಂದ ಸ್ಥಳೀಯರು ಕುಶ ಆನೆಯನ್ನು ಗುರುತಿಸಿದ್ದು, ಇದನ್ನು ಮತ್ತೆ ಸೆರೆ ಹಿಡಿದು ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ.