

ಹೂವಿನಹಡಗಲಿ: ಐತಿಹಾಸಿಕ ಕುರುವತ್ತಿಯ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಶಿವರಾತ್ರಿಯ ಅಮವಾಸ್ಯೆ ದಿನವಾದ ಶುಕ್ರವಾರ ಜರುಗಲಿದ್ದು, ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸ್ವಾಮಿಗೆ ಕಂಕಣಧಾರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಮಹಾ ಶಿವರಾತ್ರಿಯಂದು ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಯೊಂದಿಗೆ ರಥಕ್ಕೆ ಕಲಶಾರೋಹಣ ಮಾಡಲಾಗಿದ್ದು, ರಥವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಮಾ.1 ರಂದು ಕ್ಷೇತ್ರದಲ್ಲಿ ಓಕುಳಿ ನಡೆಯುವ ಮೂಲಕ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ. ಜಾತ್ರೋತ್ಸವಕ್ಕೆ ದೂರದ ಊರುಗಳಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಸ್ವಾಮಿಗೆ ಹರಕೆ ತೀರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಆರಂಭದಲ್ಲಿ ಕುರುಹು ಎತ್ತಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಕ್ಷೇತ್ರ ಜನರ ಬಳಕೆಯಲ್ಲೀಗ ಕುರವತ್ತಿ ಎಂದಾಗಿದೆ. ತುಂಗಭದ್ರಾ ತೀರದಲ್ಲಿ ಶಿವನು ಭಕ್ತರಿಗೆ ದರ್ಶನ ಕೊಡುವ ಮೂಲಕ ಕಷ್ಟಗಳಿಗೆ ಪರಿಹಾರ ನೀಡಿದ್ದು, ಈಗಲೂ ನೀಡುತ್ತಿದ್ದಾನೆ ಎಂಬ ನಂಬಿಕೆ ಇದೆ.
ಅಭಿಮುಖವಾಗಿವೆ ಶಿವ-ನಂದಿ ದೇವಸ್ಥಾನಗಳು
ಪಾರ್ವತಿ, ಪರ ಮೇಶ್ವರ ನಂದಿವಾಹನದಲ್ಲಿ ಭೂಲೋಕಕ್ಕೆ ಆಗಮಿಸಿ ರಕ್ಕಸರನ್ನು ಸಂಹರಿಸಿದರು. ನಂದಿ ಹೆಗಲು ಕೊಟ್ಟು ಎತ್ತಿ ಹಿಡಿದನೆಂಬ ಪ್ರತೀತಿ ಇದೆ. ಜಗತ್ತಿನ ಎಲ್ಲ ಭಾಗದಲ್ಲಿಯೂ ನನ್ನ ಕುರುಹು ಇದೆ. ನಿನ್ನ ಕುರುಹು ಜಗತ್ತಿಗೆ ಸಾರಲಿ ಎಂದು ಶಿವನು ವರ ನೀಡಿದ. ಅಂದಿನಿಂದ ಇಂದಿನವರೆಗೂ ಕುರುವತ್ತಿಯಲ್ಲಿ ಶಿವನಿಗಿಂತ ನಂದಿ ವಿಶೇಷವೆನಿಸಿದ್ದು, ಬೇಡಿ ಬಂದ ಭಕ್ತರ ಕಷ್ಟಗಳನ್ನು ಈಡೇರಿಸುತ್ತಿದ್ದಾನೆ ಎಂಬ ನಂಬಿಕೆ ಇದೆ. ಶಿವ ಮತ್ತು ನಂದಿಯ ಎರಡೂ ದೇವಾಲಯಗಳು ಪರಸ್ಪರ ಅಭಿಮುಖವಾಗಿರುವುದು ವಿಶೇಷವಾಗಿದೆ. ತುಂಗಭದ್ರಾ ನದಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತಿದ್ದು, ಇದನ್ನು ಪಶ್ಚಿಮವಾಹಿನಿ ಎಂದು ಕೂಡ ಕರೆಯಲಾಗುತ್ತದೆ.
ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣ
ಕಲ್ಯಾಣಿ ಚಾಲುಕ್ಯರ ದೊರೆ ಒಂದನೇ ಸೋಮೇಶ್ವರನ ಆಡಳಿತಾವಧಿಯ 10 ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ಶಿಲ್ಪಕಲಾ ವೈಭವದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಮಲ್ಲಿಕಾರ್ಜುನ ದೇಗುಲದ ಪೂರ್ವ, ಉತ್ತರ, ದಕ್ಷಿಣದ ಮೂರು ಮಹಾದ್ವಾರಗಳಲ್ಲಿ ಕಲಾಕೃತಿಗಳ ವಿಶೇಷ ಕೆತ್ತನೆ ಆಕರ್ಷಣೀಯವಾಗಿದೆ. 1190 ರಲ್ಲಿ ಅಹವಮಲ್ಲ ನಿರ್ಮಿಸಿದ ಕಾರಣಕ್ಕೆ ಶಾಸನಗಳಲ್ಲಿ ಅಹವ ಮಲ್ಲೇಶ್ವರ ದೇವಾಲಯ ಎಂದು ಕೂಡ ಉಲ್ಲೇಖವಾಗಿದೆ.