

ಚನ್ನರಾಯಪಟ್ಟಣ: ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾ.2ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಕನ್ನಡಾಂಬೆ ಕಲಾ ತಂಡ ಮತ್ತು ಶ್ರೀ ಚಾಮುಂಡೇಶ್ವರಿ ಮಹಿಳಾ ಮಂಡಳಿ ವತಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಾಟಕದ ನಿರ್ದೇಶಕಿ ಸವಿತಾ ಕುಮಾರ್ ತಿಳಿಸಿದರು.
ಬಂದೂರು ಶ್ರೀ ಸಿದ್ದಲಿಂಗೇಶ್ವರ ಡ್ರಾಮಾ ಸೀನ್ಸ್ ಮತ್ತು ವಿದ್ಯುತ್ ದೀಪಾಲಂಕಾರದಿಂದ ಕೂಡಿದ ಭವ್ಯ ರಂಗ ವೇದಿಕೆಯಲ್ಲಿ ಸಂಪೂರ್ಣವಾಗಿ ಮಹಿಳಾ ಕಲಾವಿದರೇ ಅಭಿನಯಿಸುತ್ತಿದ್ದಾರೆ. ಅಂದು ಮಧ್ಯಾಹ್ನ 2ಕ್ಕೆ ನಾಟಕ ಪ್ರದರ್ಶನ ಆರಂಭವಾಗಿ ರಾತ್ರಿ 11ಕ್ಕೆ ಮುಕ್ತಾಯವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಆಗಮಿಸಿ ಪೋತ್ಸಾಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
13 ವರ್ಷದಿಂದ 60 ನಾಟಕ ಕಲಿಸಲಾಗಿದೆ. ಅವುಗಳಲ್ಲಿ ಪುರುಷ ಕಲಾವಿದರೂ ಅಭಿನಯಿಸಿದ್ದಾರೆ. ಇದೇ ಪ್ರಥಮ ಭಾರಿಗೆ ಮಹಿಳೆಯರಿಗೆ ನಾಟಕ ಕಲಿಸಲಾಗಿದ್ದು, ಕೆಲಸದ ಒತ್ತಡದ ನಡುವೆಯೂ ಮಹಿಳೆಯರನ್ನು ಕಲೆಹಾಕಿ ನಾಟಕದಲ್ಲಿ ಆಸಕ್ತಿ ಮೂಡಿಸಲಾಗಿದ್ದು, ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ ಎಂದರು.
ಕಲಾವಿದೆ ಕುಶಲಮತಿ ಮಾತನಾಡಿ, ನಾಟಕದಲ್ಲಿ ಎಲ್ಲ 22 ಪಾತ್ರಗಳಲ್ಲಿ ಮಹಿಳೆಯರು ಅಭಿನಯಿಸಿದ್ದಾರೆ. ವಿಶೇಷವೆಂದರೆ ನಾಟಕದ ನಿದೇಶಕರೂ ಮಹಿಳೆ. 4 ತಿಂಗಳಲ್ಲಿ ನಾಟಕ ಕಲಿತ್ತಿದ್ದೇವೆ ಎಂದು ಹೇಳಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕತ್ತರಿಘಟ್ಟ ಮಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ ಗುರೂಜಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಶಾಸಕ ಸಿ.ಎನ್.ಬಾಲಕೃಷ್ಣ, ಸಂಸದ ಡಾ.ಸಿ.ಎನ್.ಮಂಜುನಾಥ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ತಾಲೂಕು ಬಿಜೆಪಿ ಮುಖಂಡ ಎ.ಸಿ.ಆನಂದ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೆನಹಳ್ಳಿ ರಾಮಚಂದ್ರ, ಮುಖಂಡರಾದ ಎಂ.ಎ. ಗೋಪಾಲಸ್ವಾಮಿ, ಸಿ.ಎಸ್.ಪುಟ್ಟೇಗೌಡ, ಕುಸುಮಾ ಬಾಲಕೃಷ್ಣ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಕನ್ನಡಾಂಬೆ ಕಲಾತಂಡದ ಅಧ್ಯಕ್ಷೆ ಸಾವಿತ್ರಮ್ಮ ಶೆಟ್ಟಿಹಳ್ಳಿ, ಹೇಮಾ, ನೇತ್ರಾವತಿ ವನಜಾಕ್ಷಿ, ನಿಕಿತಾ, ಕಾಂತಮಣಿ, ಸುಜಾತಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.