

ಚನ್ನರಾಯಪಟ್ಟಣ: ಅತಿಹೆಚ್ಚು ಪೌರಣಿಕ ಕಲಾವಿದರನ್ನು ಹೊಂದಿರುವ ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಕ್ಕಳ ವಿಶೇಷ ಪ್ರಯತ್ನ ಎಂಬಂತೆ ನ.23ರಂದು ಪಟ್ಟಣದಲ್ಲಿ ಬಾಲ ಕಲಾವಿದರಿಂದಲೇ ಪೌರಾಣಿಕ ನಾಟಕ ಪ್ರದರ್ಶನಗೊಳ್ಳುತ್ತಿದೆ.
ನಾಟಕ ಪ್ರದರ್ಶನಕ್ಕಾಗಿ ಮಕ್ಕಳು ಪಟ್ಟಣದ ಬಾಗೂರು ರಸ್ತೆಯಲ್ಲಿನ ಮಹಾಭುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್‌ನ ಕಚೇರಿಯಲ್ಲಿ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾರೆ.
ಪಟ್ಟಣದ ಬಾಗೂರು ರಸ್ತೆಯಲ್ಲಿನ ನ್ಯೂ ಮಾರುತಿ ಎಲೆಕ್ಟ್ರಾನಿಕ್ ಲ್ಯಾಂಡ್‌ನ ಮಾಲೀಕರಾದ ಕೆ.ಎಚ್.ರಾಜೇಶ್ ಅವರು ತಮ್ಮ ಶ್ರೀ ಮಾಹಾಭುಜ ಮಾರುತಿ ಇಂಡಿಯನ್ ಸೇವಾ ಟ್ರಸ್ಟ್‌ನಡಿ ಮಕ್ಕಳಿಗೆ ಕುರಕ್ಷೇತ್ರ ಪೌರಣಿಕ ನಾಟಕ ಕಲಿಸಲು ಮುಂದಾಗಿದ್ದಾರೆ. ಇದಕ್ಕಾಗಿ ತಮ್ಮ ಟ್ರಸ್ಟ್‌ನ ಕಚೇರಿಯಲ್ಲಿ ತಾಲೀಮು ನಡೆಸಲು ಅವಕಾಶ ಕಲ್ಪಿಸಿದ್ದಾರೆ. ನಾಟಕದ ನಿರ್ದೇಶಕ ಪ್ರಜ್ವಲ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಾಯಾರಿ ನಡೆಸಿದ್ದಾರೆ.
ಮಕ್ಕಳ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ರಜಾ ದಿನಗಳಲ್ಲಿ ನಾಟಕದ ತಯಾರಿ ನಡೆಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ದಿನವಿಡೀ ಅಭ್ಯಾಸವಿರುತ್ತದೆ. ಮಕ್ಕಳು ನಾಲ್ಕು ತಿಂಗಳಲ್ಲಿಯೇ ನಾಟಕದ ಅಭ್ಯಾಸವನ್ನು ಪೂರ್ಣಗೊಳಸಿದ್ದಾರೆ. ದೀಪಾವಳಿ ಶುಭದಿನದಂದು ನಾಟಕದ ಎಲ್ಲ ಮಕ್ಕಳು ಸೇರಿ ಗೆಜ್ಜೆಪೂಜೆ ನಡೆಸಿ, ಸಾಮೂಹಿಕ ಪ್ರಾರ್ಥನೆಯೊಂದಿಗೆ ನಾಟಕ ಪ್ರದರ್ಶನ ಮಾಡಿದರು.
ಟ್ರಸ್ಟ್‌ನ ಕಾರ್ಯದರ್ಶಿ ರಾಜೇಶ್ ಕೆಂಚನಹಳ್ಳಿ ಮಾತನಾಡಿ, ಜಿಲ್ಲೆಗೆ ವಿನೂತನ ಕಾರ್ಯಕ್ರಮವನ್ನು ನಮ್ಮ ಟ್ರಸ್ಟ್‌ನಡಿ ನೀಡಬೇಕು ಎಂಬ ಆಶಯದೊಂದಿಗೆ ಮಕ್ಕಳನ್ನೇ ಪ್ರಧಾನವಾಗಿರಿಸಿಕೊಂಡು ಕುರುಕ್ಷೇತ್ರ ನಾಟಕ ಕಲಿಸಲಾಗುತ್ತಿದೆ. ಇದಕ್ಕಾಗಿ ಆಸಕ್ತ 30 ಮಕ್ಕಳನ್ನು ಆಯ್ಕೆ ಮಾಡಿಕೊಂಡು ನಾಟಕ ಕಲಿಸಲಾಗಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಪ್ರತಿ ಶನಿವಾರ ಮತ್ತು ಭಾನುವಾರವಷ್ಟೇ ನಾಟಕದ ಅಭ್ಯಾಸ ಕಾರ್ಯ ಮಾಡಿಕೊಂಡು ಬರಲಾಗಿದೆ. ಮಕ್ಕಳು ಹೆಚ್ಚು ಗ್ರಹಿಸುವ ಶಕ್ತಿ ಹೊಂದಿರುವ ಕಾರಣ ನಾಟಕದ ಡೈಲಾಗ್, ಅಭಿನಯವನ್ನು ಮನೋಜ್ಞವಾಗಿ ಮಾಡುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳೊಂದಿಗೆ ಆಗಮಿಸಿ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದರು.
ಪಟ್ಟಣದಲ್ಲಿ ಮಹಿಳೆಯರೇ ಸೇರಿ ಕುರಕ್ಷೇತ್ರ ನಾಟಕ ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ ಕಲಾವಿದರಾದ ದುರ್ಯೋಧನನ ಪಾತ್ರಧಾರಿ ನೇತ್ರಾ ನವೀನ್ ಹಾಗೂ ಶ್ರೀ ಕೃಷ್ಣನ ಪಾತ್ರಧಾರಿ ಹೇಮಾ ಬಾಬು ಅವರ ಟ್ರಸ್ಟ್‌ನ ಕಚೇರಿಗೆ ಭೇಟಿ ನೀಡಿ ಮಕ್ಕಳ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಾತ್ರಧಾರಿಗಳು: ಶ್ರೀ ಕೃಷ್ಣನ ಪಾತ್ರದಲ್ಲಿ ಕೆ.ಆರ್.ಧಣಿ, ದುರ್ಯೋಧನನಾಗಿ ಧನುಷ್, ಅರ್ಜುನನಾಗಿ ಧ್ಯಾನ್ ಮಂಜುನಾಥ್, ಭೀಮನ ಪಾತ್ರದಲ್ಲಿ ದಿಶಾಂತ್, ಧರ್ಮರಾಯನಾಗಿ ಹಿತೇಶ್, ರುಕ್ಮಿಣಿ ಪಾತ್ರದಲ್ಲಿ ಹನಿ, ವಿದುರನಾಗಿ ಕುಶಾಲ್, ಭೀಷ್ಮನಾಗಿ ಶೌರ್ಯ, ಅಭಿಮನ್ಯುವಾಗಿ ಮಧುವನ್, ಕರ್ಣನ ಪಾತ್ರದಲ್ಲಿ ಉತ್ಕರ್ಷ, ಉತ್ತರೆ ಪಾತ್ರದಲ್ಲಿ ಲಹರಿ, ಶಕುನಿಯಾಗಿ ರಮ್ಯಾ, ಶೀತಲಾಂಬ ಹಾಗೂ ಧನ್ಯಾ ರಾಜ್ ಅವರು ಸೂತ್ರಧಾರಿ, ದುಶ್ಯಾಸನ, ಕುಂತಿ, ಹಾಗೂ ದ್ರೌಪದಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾರ್ಮೋನಿಯಂನಲ್ಲಿರುವ ಪ್ರಜ್ವಲ್ ಜಗದೀಶ್ ನಿರ್ದೇರ್ಶಿಸಿದ್ದಾರೆ. ಸಚಿನ್ ರಂಗರಾಜು ಮಟ್ಟನವಿಲೇ ಕ್ಯಾಶಿಯೋ, ಲೋಕಾಭಿರಾಮ್ ಮಂಡ್ಯ ಅವರು ತಬಲಾ ಹಾಗೂ ಕುಮಾರಣ್ಣ ಕ್ಯಾರೋನೆಟ್ ನುಡಿಸುತ್ತಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ರಂಗಸಜ್ಜಿಕೆಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.