

ಕುರುಗೋಡು: ಕಟಾವು ಹಂತಕ್ಕೆ ಬಂದಿದ್ದ ಭತ್ತ, ಸತತ ಮಳೆಯಿಂದ ನೆಲಸಮಗೊಂಡಿರುವುದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ತೆಕ್ಕಲಕೋಟೆ ಹೋಬಳಿ ವ್ಯಾಪ್ತಿಯಲ್ಲಿ 14,480 ಹೆಕ್ಟೇರ್ ಬಿತ್ತನೆಯಾಗಿದೆ. ಅಂದಾಜು 300 ಹೆಕ್ಟೇರ್ ಮಳೆಗೆ ಹಾನಿಯಾಗಿದೆ. ಭತ್ತದ ಕಾಳುಗಳು ನೆಲಕ್ಕೊರಗಿವೆ. ಕಳೆನಾಶಕ, ರಸಗೊಬ್ಬರ, ಕಾರ್ಮಿಕರ ಕೂಲಿ ಸೇರಿ ಇತರ ವೆಚ್ಚ ಸೇರಿದರೆ ಎಕರೆಗೆ 45 ಸಾವಿರ ರೂ. ರೈತರು ವ್ಯಯಿಸುತ್ತಿದ್ದಾರೆ. ಮಳೆಯ ಅವಾಂತರದಿಂದ ಮಾಡಿದ ವೆಚ್ಚ ಬರುತ್ತದೆಯೋ, ಇಲ್ವೋ ಎಂಬ ಗೊಂದಲದಲ್ಲಿ ರೈತರಿದ್ದಾರೆ.
ಕಳೆದ ವರ್ಷ ಮಳೆ ಇಲ್ಲದ್ದರಿಂದ ರೈತರು ಕಂಗಾಲಾಗಿದ್ದರು. ಪ್ರಸಕ್ತ ವರ್ಷ ಉತ್ತಮ ಮಳೆಯೊಂದಿಗೆ ಇಳುವರಿ ಬಂದಿತ್ತು. ಎರಡು ಬೆಳೆಯ ಲಾಭ ಒಂದೇ ಬೆಳೆಯಲ್ಲಿ ಪಡೆಯಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ನಿರಂತರ ಮಳೆಯಿಂದ ಇಳುವರಿ ಕುಂಠಿತಗೊಂಡಿದೆ. ಆರಂಭದಲ್ಲಿ ಇರುವ ಭತ್ತದ ಬಂಪರ್ ಬೆಲೆ ಕಟಾವು ಆಗುವವರೆಗೆ ಬೆಲೆ ಸಿಗುವ ಅನುಮಾನವಿದೆ.
ಮಳೆಗೆ ನೆಲಸಮಗೊಂಡ ಭತ್ತದ ಗದ್ದೆಯನ್ನು ಉಳಿಸಿಕೊಳ್ಳಲು ರೈತರು ಸೂಡು ಕಟ್ಟಲು ಕಸರತ್ತು ನಡೆಸುತ್ತಿದ್ದಾರೆ. ಇದರಿಂದ ಮಿಷನ್‌ನಿಂದ ಕಟಾವು ಮಾಡುವುದಕ್ಕೆ ಸುಲಭವಾಗುತ್ತದೆ. ಜತೆಗೆ ಸಮಯ ಉಳಿತಾಯಗೊಂಡು ಇಳುವರಿ ಕೂಡ ಬರುತ್ತದೆ ಎಂಬ ನಿಟ್ಟಿನಲ್ಲಿ ಮಹಿಳಾ ಕೂಲಿಕಾರರಿಗೆ 250 ರೂ.ಯಂತೆ ಕೂಲಿ ನೀಡಿ ಸೂಡು ಕಟ್ಟಲು ಮುಂದಾಗಿದ್ದಾರೆ. ಇದರಿಂದ ಮಹಿಳಾ ಕೂಲಿಕಾರರಿಗೆ ಬೇಡಿಕೆ ಹೆಚ್ಚಾಗಿದೆ. ಅಕ್ಕಪಕ್ಕದ ಊರಿನ ಕೂಲಿಕಾರರನ್ನು ಕರೆದುಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.