

ಕುರುಗೋಡು: ಸತಿ-ಪತಿಗಳು ಒಂದಾಗಿ ಸುಂದರವಾದ ಜೀವನ ಸಾಗಿಸಿದರೆ ಆ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ. ಪತಿಯ ಇಚ್ಚೆ ಅರಿತು ಸತಿಯಿದ್ದರೆ ಮನೆಯೇ ಸ್ವರ್ಗವಾಗುವುದು ಎಂದು ಶ್ರೀ ಸದ್ಗರು ಷಡಕ್ಷರಿ ಮಹಾಸ್ವಾಮಿ ಅವಧೂತರು ಹೇಳಿದರು.
ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ 30ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು-ವರರರನ್ನು ಆಶೀರ್ವಾದಿಸಿ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯ ಹೆಚ್ಚಾದಂತೆಲ್ಲ ಬಡ ಕುಟುಂಬಗಳಿಗೆ ವರದಾನವಾಗುವ ಜತೆಗೆ ಸರ್ವರೂ ಸಮಾನರು ಎಂಬ ಭಾವನೆ ಅರಿವು ಮೂಡುತ್ತದೆ.ಎರಡು ವರ್ಷಗಳು ಕೋವಿಡ್-19 ರಿಂದಾಗಿ ಸಾಮೂಹಿಕ ವಿವಾಹಗಳು ಸ್ಥಗಿತಗೋಂಡಿದ್ದವು. ಈ ಪ್ರಸಕ್ತ ವರ್ಷದಲ್ಲಿ ಕರೊನಾ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಸರ್ವಧರ್ಮ ಸಾಮೂಹಿಕ ವಿವಾಹ ಅದ್ದೂರಿಯಾಗಿ ನಡೆಯಿತು ಎಂದರು.
ಅಜಾತ ಶ್ರೀ ನಾಗಲಿಂಗ ಲೀಲೆ ಆಧ್ಯಾತ್ಮಿಕ ನಾಟಕ ಮತ್ತು ಶ್ರೀ ರೇಣುಕಾದೇವಿ ಜಮದಗ್ನಿ ಕಲ್ಯಾಣ ಅರ್ಥಾತ್ ಕಾರ್ತಿ ವೀರ್ಯನ ವಧೆ ಎಂಬ ಪೌರಾಣಿಕ ನಾಟಕಗಳ ಪ್ರದರ್ಶನಗೊಂಡವು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 68 ಜೋಡಿ ವಧು-ವರರು ನವ ಜೀವನಕ್ಕೆ ಕಾಲಿಟ್ಟರು. ಶ್ರೀ ನಿರ್ವಾಣ ಸ್ವಾಮಿ ಮತ್ತು ರೇವಪ್ಪಯ್ಯ ಸ್ವಾಮಿ ವೇದಿಕೆಯ ಸಾನ್ನಿಧ್ಯ ವಹಿಸಿದ್ದರು. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ನೋಡುಗರ ಗಮನ ಸೆಳೆಯಿತು. ಗ್ರಾಮದ ಪ್ರಮುಖರು ಇದ್ದರು.
ನಂತರ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಠದಿಂದ ಪ್ರಮುಖ ಮುಖ್ಯರಸ್ತೆಯ ಮೂಲಕ ಗ್ರಾಮ ದೇವತೆ ಶ್ರೀ ಮಾರೆಮ್ಮ ದೇವಸ್ಥಾನದವರೆಗೂ ನೂತನ ವದು-ವರರ ಮೆರವಣಿಗೆ ನಡೆಯಿತು.