ಕುರುಗೋಡು ಶ್ರೀ ದೊಡ್ಡಬಸವೇಶ್ವರ ರಥೋತ್ಸವ ಅದ್ದೂರಿ

Kurugodu Doddabasaveshwara Jatre
ಕುರುಗೋಡಿನ ಶ್ರೀ ದೊಡ್ಡಬಸವೇಶ್ವರ ಮಹಾ ರಥೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
Published on

ಕುರುಗೋಡು: ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವರಿಗೆ, ಎದುರು ಬಸವಣ್ಣ ಎಂದೇ ಪ್ರತೀತಿ ಪಡೆದಿರುವ ಕುರುಗೋಡಿನ ಶ್ರೀ ದೊಡ್ಡಬಸವೇಶ್ವರ ರಥೋತ್ಸವ ಲಕ್ಷಕ್ಕೂ ಅಧಿಕ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಸಮೀಪದ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮಗಳ ಕಟ್ಟೆಮನೆ ನಾಯಕ ಸಮುದಾಯದವರು ಜಾತ್ರೆ ಹಿಂದಿನ ದಿನದಿಂದಲೇ ಉಪವಾಸವಿದ್ದು, ಬೆಳಗ್ಗೆಯಿಂದಲೇ ಶ್ರದ್ಧಾ ಭಕ್ತಿಯಿಂದ ಧೂಳುಗಾಯಿ ಹೊತ್ತು ಬರಿಗಾಲಿನಲ್ಲಿ ದೇವಸ್ಥಾನಕ್ಕೆ ನಡೆದುಕೊಂಡು ಬಂದ ನಂತರ ಧೂಳುಗಾಯಿ ಒಡೆದು, ಕುಂಭವನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರ್ಪಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ದೊಡ್ಡಬಸವೇಶ್ವರಗೆ ಹೂವಿನ ಅಲಂಕಾರ, ದೇವಸ್ಥಾನದ ಪ್ರಾಂಗಣ, ಒಳಭಾಗದಲ್ಲಿ ಹೂ, ಹಣ್ಣು, ತರಕಾರಿಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಗುತ್ತಿಗೆನೂರು, ಎಮ್ಮಿಗನೂರು, ಸೋಮಲಾಪುರ, ಕೆರೆಕೆರೆ, ಓರ‌್ವಾಯಿ, ಪಟ್ಟಣಸೆರಗು, ಕಲ್ಲುಕಂಬ, ಲಕ್ಷ್ಮೀಪುರ, ಯಲ್ಲಾಪುರ, ಗೆಣಿಕೆಹಾಳು, ಮದಿರೆ, ಕೋಳೂರು, ದಮ್ಮೂರು, ಸಿಂಧಿಗೇರಿ, ಬಾದನಹಟ್ಟಿ, ಕೊಂಚಿಗೇರಿ ಮತ್ತಿತರ ಗ್ರಾಮಸ್ಥರು ಚಕ್ಕಡಿ (ಎತ್ತಿನ ಬಂಡಿ), ಟ್ರಾೃಕ್ಟರ್, ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದರು.

ನೀರು, ಮಜ್ಜಿಗೆ ವಿತರಣೆ: ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ದಾರಿಯುದ್ದಕ್ಕೂ ನೀರು, ಮಜ್ಜಿಗೆ, ಅನ್ನ ಪ್ರಸಾದ ಕೊಟ್ಟು ಕೆಲವರು ಭಕ್ತಿ ಮೆರೆದರು. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರತಿ ರಸ್ತೆಯಲ್ಲೂ ಸಾವಿರಾರು ಭಕ್ತರು ಪಾದಾಯತ್ರೆ ಬರುವುದು ಕಂಡು ಬಂತು. ಧಾರ್ಮಿಕ ದತ್ತಿ ಇಲಾಖೆಯಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದವು. ರಥೋತ್ಸವ ನಿಮಿತ್ತ ಗಂಗಾವತಿ ಪ್ರಾಣೇಣ್ ಮತ್ತು ತಂಡದವರಿಂದ ನಗೆ ಹಬ್ಬ ನಂತರ ಸಾಸ್ಕೃತಿಕ ಕಾರ್ಯಕ್ರಮ ನಡೆದವು.

ತೇರೆಳೆದ ಬಳಿಕ ಅಂಗಡಿಗಳಿಗೆ ಅನುಮತಿ: ಜಾತ್ರೆ ವೇಳ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ತೇರೆಳೆದ ನಂತರ ಅಂಗಡಿಗಳನ್ನು ಹಾಕಲು ಅನುಮತಿ ನೀಡಲಾಯಿತು. ರಥೋತ್ಸವ ಕಾಣಿಸಲು, ಕಾಲ್ತುಳಿತ ತಪ್ಪಿಸಲು ಈ ಕ್ರಮ ಫಲ ನೀಡಿತು. ಭಕ್ತರು ರಥಕ್ಕೆ ಹೂವು, ಹಣ್ಣು ಎಸೆದು ಭಕ್ತಿ ಅರ್ಪಿಸಿದರು.
ಅನ್ನ ಸಂತರ್ಪಣೆ: ರಥೋತ್ಸವ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗಾಗಿ ಗಂಗಾವತಿ ಹಾಗೂ ಢಣಾಪುರದ ಶಿವಮಾಲೆ ಭಕ್ತವೃಂದದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಇದು ಈ ಸಂಘದಿಂದ ನಡೆಯುತ್ತಿರುವುದು 13 ನೇ ವರ್ಷದ ಸೇವೆ ಆಗಿರುವುದು ವಿಶೇಷ. ಸಂದ ಪ್ರಮುಖರಾದ ವೀರನಗೌಡ, ಶಿವಣ್ಣ, ದೊಡ್ಡನಗೌಡ, ಅರುಣೋದಯ ಸ್ವಾಮಿ, ಬಸವ ಶಿವ, ವಿರೂಪಾಕ್ಷ ಪಾಟೀಲ್ ಇತರರು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net