ಬಿತ್ತನೆಗೂ ಮುನ್ನ ಬೀಜೋಪಚಾರ ಕಡ್ಡಾಯ, ರೈತರಿಗೆ ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ ಸಲಹೆ

020622 Kurugodu Sowing Seed Distribution Program
ಕುರುಗೋಡಿನ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಗುರುವಾರ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ ಚಾಲನೆ ನೀಡಿದರು.
Published on

ಕುರುಗೋಡು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮವನ್ನು ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದು, ರೈತರು ಇದರ ಲಾಭ ಪಡೆಯಲು ಮುಂದಾಗುವಂತೆ ರೈತರಿಗೆ ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ ಸಲಹೆ ನೀಡಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಗುರುವಾರ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ತಿಂಗಳು ಮುಂಗಾರು ಪೂರ್ವದಲ್ಲಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಬೀಜ ಬಿತ್ತನೆಗೆ ಸಿದ್ಧಗೊಳಿಸಿದ್ದಾರೆ. ರೈತರಿಗೆ ನೆರವಾಗಲೆಂದು ಕೃಷಿ ಇಲಾಖೆ ಕೂಡ ಅಗತ್ಯವಿರುವ ಭತ್ತ, ಸಜ್ಜೆ, ನವಣೆ, ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಒಂದು ಎಕರೆಗೆ ಭತ್ತ-25 ಕೆ.ಜಿ., ಸಜ್ಜೆ-2 ಕೆ.ಜಿ., ನವಣೆ-2 ಕೆ.ಜಿ, ತೊಗರಿ-5 ಕೆ.ಜಿ., ಸೂರ್ಯಕಾಂತಿ-2 ಕೆ.ಜಿ., ಮೆಕ್ಕೆಜೋಳ-5 ಕೆ.ಜಿ.ಯಂತೆ ವಿತರಿಸಲು ಅವಕಾಶವಿದೆ. ರೈತರು ತಮ್ಮ ದಾಖಲೆ ಸಲ್ಲಿಸಿ ತಮಗೆ ಬೇಕಿರುವ ಬಿತ್ತನೆ ಬೀಜಗಳನ್ನು ಕೊಂಡೊಯ್ಯಬಹುದು ಎಂದು ಹೇಳಿದರು.

ರೈತರು ಬೀಜ ಬಿತ್ತನೆಗೆ ಮುಂಚೆ ಬೀಜೋಪಚಾರ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಬೆಳೆಗೆ ಬಾಧಿಸುವ ಕೆಲವು ರೋಗಳನ್ನು ತಕ್ಕ ಮಟ್ಟಿಗೆ ತಡೆಯಲು ಸಾಧ್ಯ. ಹವಾಮಾನ ವೈಪರಿತ್ಯದಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆಗಳು ಹಾಳಾಗಿ ರೈತ ನಷ್ಟಕ್ಕೆ ಸಿಲುಕದಿರಲು ರೈತರು ಬೆಳೆ ವಿಮೆ ಮಾಡಿಸುವುದು ಅತಿ ಅವಶ್ಯಕ. ಅಲ್ಲದೆ ರೈತರು ಒಂದೇ ಬೆಳೆ ಬೆಳೆಯದೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಲ್ಲಿ ನಷ್ಟಕಿಂತ ಲಾಭವೆ ಜಾಸ್ತಿ ಎಂದು ಹೇಳಿದರು. ರೈತ ಅನುವುಗಾರ ಮಲ್ಲಪ್ಪ, ರೈತರಾದ ಕ್ಯಾದಿಗೆಹಾಳು ನಾಗರಾಜ, ಓರ‌್ವಾಯಿ ಉಮಾಪತಿ, ದೊಡ್ಡಬಸಪ್ಪ, ಸೋಮಶೇಖರ, ಶ್ರೀಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net