

ಕುರುಗೋಡು: ತಾಲೂಕಿನ ಸೋಮಲಾಪುರದಲ್ಲಿ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ 33ನೇ ವರ್ಷದ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 68 ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಪಂಚ ಮಠಾಧೀಶ ಶ್ರೀ ಸದ್ಗುರು ಷಡಕ್ಷರಿಸ್ವಾಮಿ ಅವಧೂತರು ಮಾತನಾಡಿ, ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ಮುಂದಿನ ಪೀಳಿಗೆಗೆ ದಾರಿದೀಪ ಆಗಬೇಕು. ಸಾಮೂಹಿಕ ಮದುವೆ ಎಂದರೆ ಬಡವರ ಮದುವೆ ಅಲ್ಲ. ಭಾಗ್ಯವಂತರ ಮದುವೆ. ದುಂದುವೆಚ್ಚದಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದರಿಂದ ಬಡ ಹಾಗೂ ಮಧ್ಯಮ ವರ್ಗದವರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಅವರ ಆರ್ಥಿಕಮಟ್ಟ ಸುಧಾರಣೆಗೆ ಇಂತಹ ಸಾಮೂಹಿಕ ವಿವಾಹಗಳು ಅಗತ್ಯ ಎಂದರು.
ರಥೋತ್ಸವ ಸಂಪನ್ನ: ವಿವಿಧ ಪೂಜಾ ಕೈಂಕರ್ಯಗಳಿಂದ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಮಠದಿಂದ ಗ್ರಾಮದ ರಾಜ ಬೀದಿಯಲ್ಲಿ ಸಾಗಿದ ರಥಕ್ಕೆ ಭಕ್ತರು ಹೂವು, ಹಣ್ಣು ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ನಮಿಸಿದರು. ಸಿಂಧನೂರಿನ ಬಂಗಾರಿ ಕ್ಯಾಂಪ್, ರೌಡಕುಂದ ಸಿದ್ಧಾಶ್ರಮದ ಡಾ. ಶ್ರೀ ಸಿದ್ದರಾಮ ಶರಣರು, ಎಚ್. ವೀರಾಪುರದ ಜ್ಞಾನಜ್ಯೋತಿ ಜಡೇಶ ಶಿವಯೋಗ ಮಂದಿರದ ಶ್ರೀ ಜಡೇಶ ತಾತ ಇದ್ದರು.