

ಕುರುಗೋಡು: ಎಸ್ಸಿ, ಎಸ್ಟಿ ಮೀಸಲು ವಿಚಾರವಾಗಿ ಸರ್ಕಾರ ಆದಷ್ಟು ಬೇಗ ಸಿಹಿ ಸುದ್ದಿ ನೀಡಲಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ತಾಲೂಕಿನ ಕೋಳೂರು ಕ್ರಾಸ್ ಬಳಿ 7 ಕೋಟಿ ರೂ. ವೆಚ್ಚದ ಡಿ7 ಪುನಶ್ಚೇತನ ಏತ ನೀರಾವರಿಯನ್ನು ಗುರುವಾರ ಉದ್ಘಾಟಿಸಿ, ಮಾತನಾಡಿದರು. 1997-98ರಲ್ಲಿ ಏತ ನೀರಾವರಿ ಯೋಜನೆ ಜಾರಿಗೆ ಬಂತು. ಅಲ್ಲಿಂದ ಕೆಲ ಯೋಜನೆಗಳು ನನೆಗುದಿಗೆ ಬಿದ್ದವು. ಸದ್ಯ ಬಿಜೆಪಿ ಸರ್ಕಾರ ಏತ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಕೋಳೂರು ಏತ ನೀರಾವರಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದು, ಈ ಭಾಗದ ರೈತರ ಬಹು ದಿನಗಳ ಬೇಡಿಕೆ ಈಗ ಈಡೇರುತ್ತಿದ್ದು, ಸಾವಿರಾರು ರೈತರಿಗೆ ಅನುಕೂಲವಾಗಿದೆ ಎಂದರು. ಮಾತನಾಡಲು ಹೆಚ್ಚಿನ ವಿಷಯಗಳಿವೆ. ಪಕ್ಕದಲ್ಲಿ ಶಾಸಕ ಜೆ.ಎನ್.ಗಣೇಶ ಇದ್ದಾರೆ. ಆದ್ದರಿಂದ ಹೆಚ್ಚುಗೆ ಮಾತನಾಡವುದು ಬೇಡ ಎಂದು ಪದೇಪದೆ ಪೆಚಾಡಿದ್ದು, ಎಲ್ಲರ ಗಮನ ಸೆಳೆಯಿತು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದ್ದಾಗ ಈ ಯೋಜನೆ ಅನುಷ್ಠಾನಗೊಂಡಿದೆ. ಬಿಜೆಪಿ ಸರ್ಕಾರದಿಂದ ಅಲ್ಲ. ಕೋಳೂರು ಏತ ನೀರಾವರಿಯು 50 ಸಾವಿರ ಕ್ಯೂಸೆಕ್ ಇದ್ದು 3750 ಎಕರೆ ವ್ಯಾಪ್ತಿಗೆ ನೀರು ಸರಬರಾಜು ಆಗಲಿದೆ. ಬೈಲೂರು, ಸಿಂಧಿಗೇರಿ, ಶಾನವಾಸಪುರ, ಕೊಂಚಗೇರಿ, ಡಿ.ಕಗ್ಗಲ್ ಗ್ರಾಮಸ್ಥರಿಗೆ ಅನುಕೂಲ ವಾಗಲಿದೆ. ಕಲ್ಲಕಂಭ, ಹಡ್ಲಿಗಿ ಗ್ರಾಮದಲ್ಲಿ ಏತ ನೀರಾವರಿ ಯೋಜನೆಯು ನೆನಗುದಿಗೆ ಬಿದ್ದಿದ್ದು, ಶೀಘ್ರ ಅವುಗಳನ್ನು ಪುನಚ್ಚೆತನ ಗೊಳಿಸಲಾಗುವುದು ಎಂದರು.
ಪ್ರಾರಂಭದಲ್ಲಿ ದಮ್ಮೂರು ವೆಂಕಾವಧೂತರ ದೇವಸ್ಥಾನದಿಂದ ಕೋಳೂರು ಡಿ7 ಏತ ನೀರಾವರಿ ಯೋಜನೆಯ ಸ್ಥಳದ ವರೆಗೆ ಎತ್ತಿನ ಬಂಡಿ ಮೂಲಕ ನೂರಾರು ಕಾರ್ಯಕರ್ತರೊಂದಿಗೆ ಶಾಸಕ ಜೆ.ಎನ್.ಗಣೇಶ್ ಆಗಮಿಸಿದರು. ಮೊದಲೇ ತಲುಪಿದ್ದ ಸಚಿವ ಶ್ರೀ ರಾಮುಲು, ಗಣೇಶ್ ಬರುವವರಿಗೆ ಕಾದು, ನಂತರ ಇಬ್ಬರೂ ಉದ್ಘಾಟನೆ ನೆರೆವೇರಿಸಿದರು.
ಮಾಜಿ ಸಂಸದೆ ಜೆ.ಶಾಂತಾ, ಮುಖಂಡರಾದ ಕೃಷ್ಣಮೂರ್ತಿ, ಲಕ್ಷ್ಮೀಕಾಂತರೆಡ್ಡಿ, ಸಿ.ಚನ್ನಬಸವರಾಜ, ಶೇಖಣ್ಣ, ನಾಗಭೂಷಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕೆ.ದುರುಗಪ್ಪ, ಅಧೀಕ್ಷಕ ಅಭಿಯಂತರ ಬಸವರಾಜ.ಎಲ್, ಕಾರ್ಯಪಾಲಕ ಅಭಿಯಂತರ ಸುರೇಶ್, ಎಇಇ ಸುರೇಂದ್ರ ರೆಡ್ಡಿ, ಎಇ ಜಿ.ಕಿರಣ್ ಇತರರಿದ್ದರು.
ಅಭಿಮಾನಿಗಳ ಆರ್ಭಟ, ನಾಯಕರ ಪರದಾಟ
ಡಿ7 ಪುನಶ್ಚೇತನ ಏತ ನೀರಾವರಿ ಯೋಜನೆಯ ಕ್ರೆಡಿಟ್ ಪಡೆಯಲು ಸಚಿವ ಶ್ರೀರಾಮುಲು ಹಾಗೂ ಶಾಸಕ ಜೆ.ಎನ್.ಗಣೇಶ್ ಅಭಿಮಾನಿಗಳು ಯತ್ನಿಸಿದರು. ಜಾಕ್‌ವೆಲ್ ರೂಂನಲ್ಲಿ ತುಂಬಿಕೊಂಡ ಅಭಿಮಾನಿಗಳ ನಡುವೆ ಜನಪ್ರತಿನಿಧಿಗಳು ಸಿಲುಕಿಕೊಂಡರು. ಯೋಜನೆಯ ಉದ್ಘಾಟನೆಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಜೆ.ಎನ್.ಗಣೇಶ್ ಒಟ್ಟಿಗೆ ಜಾಕ್‌ವೆಲ್ ರೂಂಗೆ ತೆರಳಿದರು. ಈ ವೇಳೆ ಅಭಿಮಾನಿಗಳು ಗುಂಪು ಕೂಡ ಜಮಾವಣೆಗೊಂಡಿತು. ಇಬ್ಬರು ನಾಯಕರೂ ವಾಲ್ವ್ ತಿರುಗಿಸಿ ನೀರು ಬಿಟ್ಟ ನಂತರ, ಕೆಳಗೆ ಇಳಿದು ಹೊರಬರುವ ಹೊತ್ತಿಗೆ ಹೈರಾಣಾದರು.