

ಕುರುಗೋಡು: ಪಟ್ಟಣದ 14ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಮರು ಆರಂಭಕ್ಕೆ ಒತ್ತಾಯಿಸಿ ವಾರ್ಡ್ ನಿವಾಸಿಗಳು ಗುರುವಾರ ಪುರಸಭೆ ಕಂದಾಯ ಅಧಿಕಾರಿ ಮೆಹಬೂಬ್ ಪಾಷಾಗೆ ಮನವಿ ಸಲ್ಲಿಸಿದರು.
ವಾರ್ಡ್ ಮಹಿಳೆಯರಾದ ಪುಷ್ಪಾವತಿ, ಗೀತಾ, ಕಮಲಮ್ಮ ಮಾತನಾಡಿ, ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಮನೆಯ ತಡೆಗೋಡೆ, ಕಟ್ಟೆಗಳು ತೆರವುಗೊಳಿಸಿದ್ದಾರೆ. ಆದರೆ ಕೆಲ ಪ್ರಭಾವಿ ವ್ಯಕ್ತಿಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅವರ ಮನೆಯ ಜಾಗ ಹೋಗುತ್ತದೆ ಎಂದು ಪುರಸಭೆ ಅಧಿಕಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಮಗಾರಿ ನಿಲ್ಲುವಂತೆ ಮಾಡಿದ್ದಾರೆ. ಅಲ್ಲದೇ ರಸ್ತೆ ವಿಸ್ತರಣೆ ವೇಳೆ ಬಚ್ಚಲು ಮನೆಯ ಪೈಪ್‌ಗಳು ಒಡೆದಿವೆ. ಪರ್ಯಾಯ ಮಾರ್ಗವಿಲ್ಲದೆ ರಸ್ತೆಯಲ್ಲಿಯೇ ಬಿಡುವ ಅನಿವಾರ್ಯತೆ ಇದೆ. ಕೇವಲ ಒಂದು ಮನೆಯ ರಕ್ಷಣೆಗೆ ಪುರಸಭೆ ಅಧಿಕಾರಿಗಳು ಕಾನೂನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: 3 ವರ್ಷವಾದರೂ ಮುಗಿಯದ ವಸತಿ ಶಾಲೆ ಕಾಮಗಾರಿ
ಈ ರಸ್ತೆಯು ವಾರ್ಡ್ 14, 15, 16ನೇ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ರಸ್ತೆ ಕಿರಿದಾಗಿದ್ದು, ಕೆಲವು ಸಲ ಓಡಾಡಲು ಸಹ ತೊಂದರೆಯಾಗುತ್ತಿದೆ. ಆರೋಗ್ಯ ಸಮಸ್ಯೆ ಹಾಗೂ ಅವಘಡ ಸಂಭವಿಸಿದರೆ ಆಂಬುಲೆನ್ಸ್, ಅಗ್ನಿಶಾಮಕ ವಾಹನ ಬರುವುದಕ್ಕೂ ಸ್ಥಳವಿಲ್ಲ. ಬಳ್ಳಾರಿಗೆ ಎಸಿಗೆ ಎರಡು ಸಲ ಮನವಿ ಸಲ್ಲಿಸಲಾಗಿತ್ತು. ಪ್ರಭಾವಿಗಳಿಗೆ ಮಣಿಯದೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಎಸಿ ಸೂಚಿಸಿದ್ದರೂ, ಪುರಸಭೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಿಗಳು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು .ಇಲ್ಲವಾದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
14ನೇ ವಾರ್ಡ್‌ನ ಸದಸ್ಯ ಕೆ.ನಾಗಭೂಷಣ, ರಜಿಯಾ ಬೇಗಂ, ಲಕ್ಷ್ಮಮ್ಮ, ಶಂಶಾದಬೇಗಂ, ಮಹಾಂತಮ್ಮ, ಎಂ.ಶಾರದಮ್ಮ, ಆಶಾ, ನಾಗೇಂದ್ರಪ್ಪ, ದುರ್ಗೇಶ, ಚಂದ್ರಣ್ಣ, ರಾಜೇಶ್ವರಿ, ಯಲ್ಲಮ್ಮ ಇತರರಿದ್ದರು.