

ಕುರುಗೋಡು: ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ ನೀಡಬೇಕು. ಏ.20 ರವರೆಗೆ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನರಸಪ್ಪಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು ಮೆಣಸಿನಕಾಯಿ ಬೆಳೆಯಲಾಗುತ್ತದೆ. ಕಳೆದ ಎರಡು ವರ್ಷಗಳಿಂದ ಮೆಣಸಿನಕಾಯಿ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷವೂ ಬೆಲೆ ಕುಸಿದಿದ್ದರಿಂದ ರೈತರು ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಿದ್ದಾರೆ. ಈ ವರ್ಷವೂ ಬೆಲೆ ಕುಸಿತವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಲದ ಬಾಧೆಯಿಂದ ಕೆಲವು ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ. ಆಂಧ್ರಪ್ರದೇಶ ಸರ್ಕಾರದ ಮಾದರಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕೆಂಪು ಮೆಣಸಿನಕಾಯಿ ಖರೀದಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಎರಡು ಲಕ್ಷ ಎಕರೆ ಜಮೀನಿನಲ್ಲಿ ಭತ್ತ ಬೆಳೆಯಲಾಗಿದೆ. ಎರಡನೇ ಬೆಳೆ ತಡವಾಗಿ ನಾಟಿ ಮಾಡಿರುವ ಕಾರಣ ಏ.20 ರವರೆಗೆ ನಾಲೆಗೆ ನೀರು ಹರಿಸಬೇಕು ಎಂದು ಶರಣಪ್ಪ ದೊಡ್ಡಮನಿ ಒತ್ತಾಯಿಸಿದರು.
ಮೆಣಸಿನಕಾಯಿ ಸುರಿದ ಆಕ್ರೋಶ ವ್ಯಕ್ತಪಡಿಸಿದ ರೈತರು ಕೃಷಿ ವಲಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿವೆ ಎಂದು ದೂರಿದರು. ತಹಸೀಲ್ದಾರ್ ನರಸಪ್ಪ ಮನವಿ ಸ್ವೀಕರಿಸಿದರು. ರೈತರಾದ ದುರ್ಗ ಪಾಂಡುರಂಗ, ಗೂಳ್ಯಂ ಶಿವರಾಜ, ಗೊರವರ ಮಂಜು, ಸಿದ್ದಪ್ಪ, ಕರಿಬ್ಯಾಡರ ಕರಿಯಣ್ಣ, ಗೋರೂರು ಗಾದಿಲಿಂಗಪ್ಪ, ಪವಾಡಿ ಚಂದ್ರಪ್ಪ, ಕರಿಬ್ಯಾಡರ ಬಸವಣ್ಣ, ಚಿದಾನಂದ, ಗಂಗಣ್ಣ, ಗೋವಿಂದಪ್ಪ, ಲೋಕೇಶ, ಗಾದಿಲಿಂಗಪ್ಪ, ನಾಗರಾಜ ಇದ್ದರು.