ಅಧ್ಯಕ್ಷ-ಉಪಾಧ್ಯಕ್ಷರೇ ಚರ್ಚಿಸಿದರೆ ನಮಗೇನು ಕೆಲಸ ?

kurugodu-1
Published on

ಕುರುಗೋಡು: ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿ ನಡುವೆ ಮಾತ್ರ ಚರ್ಚೆಯಾಗುತ್ತದೆ. ಅಭಿವೃದ್ಧಿ ಕಾರ್ಯದ ಬಗ್ಗೆ ನಮಗೆ ಮಾಹಿತಿ ನೀಡುವುದಿಲ್ಲ ಎಂದು ಸದಸ್ಯರು ಗುರುವಾರ ಅಸಮಾಧಾನ ವ್ಯಕ್ತಪಡಿಸಿದರು.

ನಾವು ಈವರೆಗೂ ಠರಾವು ಪುಸ್ತಕವನ್ನೇ ನೋಡಿಲ್ಲ. ಎಲ್ಲವೂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿಯೇ ನಿರ್ಧರಿಸುವುದಾದರೆ ನಾವೇಕೆ ಇರಬೇಕೆಂದು ಪುರಸಭೆಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಶಾಸಕ ಜೆ.ಎನ್.ಗಣೇಶ್ ಮುಂದೆ ಅಳಲು ತೋಡಿಕೊಂಡರು.

ಮೂರನೇ ವಾರ್ಡ್‌ನ ತಿಪ್ಪಮ್ಮ ಮಾತನಾಡಿ, ಒಂದು ವರ್ಷ ಕಳೆದರೂ ನನ್ನ ವ್ಯಾಪ್ತಿಯಲ್ಲಿ ಬಿಡಿಗಾಸಿನ ಕೆಲಸವಾಗಿಲ್ಲ. ಮತ ನೀಡಿರುವ ಜನರು ಪ್ರಶ್ನಿಸುತ್ತಿದ್ದಾರೆ. ನಿಮ್ಮನ್ನು ಕೈ ಮುಗಿದು ಬೇಡಿಕೊಳ್ಳುವೆ ಅನುದಾನ ನೀಡಿ ಎಂದು ಕೋರಿದರು.

15ನೇ ವಾರ್ಡ್‌ನ ವೀರೇಶ್ ಮಾತನಾಡಿ, ನಮ್ಮಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಸದ್ಯ ಕೆರೆ ನಿರ್ಮಾಣಕ್ಕೆ ಕನಿಷ್ಠ ಎರಡು ವರ್ಷ ಆಗಲಿದೆ. ಅಲ್ಲಿವರೆಗೆ ಯಾವುದೇ ತಾತ್ಕಾಲಿಕ ವ್ಯವಸ್ಥೆ ಇಲ್ಲ.

ಚರಂಡಿ ಬ್ಲಾಕ್ ಆಗಿ ತ್ಯಾಜ್ಯ ರಸ್ತೆಗೆ ಹರಿಯುತ್ತಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ಬಿದ್ದು ಕಾಲು ಮುರಿದುಕೊಂಡು ಶಾಪ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಗಣೇಶ್ ಪ್ರತಿಕ್ರಿಯಿಸಿ, ಎಲ್ಲ ಸದಸ್ಯರಿಗೆ ಕೆಲಸಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿ, ಅಗತ್ಯವಿದ್ದಲ್ಲಿ ಶೀಘ್ರವೇ ಅನುದಾನ ನೀಡುವ ಭರವಸೆ ನೀಡಿದರು.

7ನೇ ವಾರ್ಡ್‌ನಲ್ಲಿ ವಿದ್ಯುತ್ ಕಂಬ ಮತ್ತು ಪರಿವರ್ತಕ ಬದಲಾವಣೆಗೆ ಅನುದಾನ ಮೀಸಲಿದ್ದರೂ ಈವರೆಗೆ ಅನುಷ್ಠಾನಗೊಂಡಿಲ್ಲ. ಜೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸೂಕ್ತ ಸ್ಪಂದನೆ ಇಲ್ಲ ಎಂದು ಎನ್.ಗುರುಮೂರ್ತಿ ಅಸಹಾಯಕತೆ ವ್ಯಕ್ತಪಡಿಸಿದರು.

ನಾಮ ನಿರ್ದೇಶಿತ ಮೃತ್ಯುಂಜಯ ಮಾತನಾಡಿ, 3ನೇ ವಾರ್ಡ್‌ನಲ್ಲಿ ಪರಿವರ್ತಕ ದಾರಿಹೋಕರ ಕೈಗೆ ತಾಕುವಂತಿದೆ. ಜನರ ಸಾವಿಗಾಗಿ ಕಾಯುತ್ತಿದ್ದೀರಾ ಎಂದು ಪ್ರಶ್ನಿಸಿದರು. 2 ಮತ್ತು 12ನೇ ವಾರ್ಡ್‌ಗಳಲ್ಲಿ ವಿದ್ಯುತ್ ಕಂಬ ಬದಲಾವಣೆಗೆ ಇದೇ ಸಂದರ್ಭದಲ್ಲಿ ಬೇಡಿಕೆ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಜೆಸ್ಕಾಂ ಎಇಇ ರಾಜೇಂದ್ರ ಪ್ರಸಾದ್, ಇಲಾಖೆಯಲ್ಲಿ ಅನುದಾನ ಮೀಸಲಿರುವುದಿಲ್ಲ.

ದುರಸ್ತಿ ಅಥವಾ ಹೊಸ ಕಂಬ, ಪರಿವರ್ತಕ ಅಳವಡಿಕೆ ಅಗತ್ಯವಿದ್ದಲ್ಲಿ ಕ್ರಿಯಾಯೋಜನೆ ತಯಾರಿಸಿ ಇಲಾಖೆ ಮೇಲಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಅನುದಾನ ಬಿಡುಗಡೆ ಬಳಿಕ ಅನುಷ್ಠಾನಗೊಳಿಸಲಾಗುವುದು. ತುರ್ತು ಇದ್ದಲ್ಲಿ ಸರಿಪಡಿಸಲಾಗುವುದು ಎಂದರು.

ಪೊಲೀಸ್ ಇಲಾಖೆ ಗುರುತಿಸಿರುವ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು 14.25 ಲಕ್ಷ ರೂ. ಮಂಜೂರು ಮಾಡಲು ಸದಸ್ಯರ ವಂತಿಗೆ ಕೇಳಿದಾಗ, ಕೆಲವು ಸದಸ್ಯರು ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತದೆ.

ನಿಮ್ಮ ಇಲಾಖೆ ಅನುದಾನದಲ್ಲಿ ಖರೀದಿಸುವಂತೆ ಹೇಳಿದರು. ಶಾಸಕರ ಅನುದಾನ ನೀಡುವೆ ಎಂದು ಗಣೇಶ್ ಹೇಳಿದರು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಮುಖ್ಯಾಧಿಕಾರಿ ಹರ್ಷವರ್ಧನ ರೆಡ್ಡಿ, ಸಿಪಿಐ ವಿಶ್ವನಾಥ ಕೆ.ಹಿರೇಗೌಡರ್ ಮತ್ತು ಪಿಎಸ್‌ಐ ಸುಪ್ರಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net