

ಕುರುಗೋಡು: ಕುಡತಿನಿ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನೂತನ ಅಧ್ಯಕ್ಷೆ ಬಸಮ್ಮ ಚಂದ್ರಪ್ಪ ವಿ. ಅವರು ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಬಸಮ್ಮ ಅವರು, ಕೈಗಾರಿಕೆ ಉದ್ದೇಶಕ್ಕೆ ಭೂಮಿ ಕೊಟ್ಟ ರೈತರು ಪಟ್ಟಣದಲ್ಲಿ ಕಾರ್ಖಾನೆ ಸ್ಥಾಪಿಸಿ ಇಲ್ಲ ಭೂಮಿ ವಾಪಸ್ ನೀಡಬೇಕು. ಉದ್ಯೋಗ ಭತ್ಯೆ ಕೊಡುವಂತೆ ರೈತರು ಧರಣಿ ನಡೆಸುತ್ತಿದ್ದಾರೆ. ಸಂಸದ ಈ.ತುಕಾರಾಮ್ ಅವರು ಭೇಟಿ ನೀಡಿ ಮನವಿ ಸ್ವೀಕರಿಸಿ, ಸರ್ಕಾರದ ಗಮನಕ್ಕೆ ತಂದಿದ್ದಾರೆ. ಬೆಳಗಾವಿ ಅಧಿವೇಶನದ ವೇಳೆ ರೈತರ ಸಭೆ ಕರೆಯ ಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ವಿಚಾರ ವಾಗಿ ದೆಹಲಿ ಚಲೋ ನಡೆಸಲು ಸಿದ್ಧರಿದ್ದೇವೆ ಎಂದರು.
ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಧೂಳಿನ ಸಮಸ್ಯೆ ಹೆಚ್ಚಾಗಿದ್ದು, ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕುರಿತು ಪಪಂ ಅಧಿಕಾರಿಗಳು ಮತ್ತು ಸದಸ್ಯರು ಸೇರಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ವಿ.ರಾಜಶೇಖರ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ 105 ಕೋಟಿ ರೂ. ಮೀಸಲಿಡಲಾಗಿದೆ. ಈ ಅನುದಾನದಲ್ಲಿ ಕುಡಿವ ನೀರಿನ ಕೆರೆ ಅಭಿವೃದ್ಧಿ, ರಸ್ತೆ, ಬೀದಿ ದೀಪ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಕೈಗೆತ್ತಿಕೊಳ್ಳಬೇಕು ಎಂದರು. ಸದಸ್ಯ ವೆಂಕಟರಮಣ ಬಾಬು ಇತರರಿದ್ದರು.